×
Ad

2027ರಲ್ಲಿ ಶೇ.7.2 ಜಿಡಿಪಿ ಬೆಳವಣಿಗೆ: 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಬಹಿರಂಗ

Update: 2026-01-29 20:53 IST

ನಿರ್ಮಲಾ ಸೀತಾರಾಮನ್ | Photo Credit : PTI 

ಹೊಸದಿಲ್ಲಿ,ಜ.29: ಕೇಂದ್ರ ಸರಕಾರದ ಯೋಜಿತ ಕಲ್ಯಾಣ ಕಾರ್ಯಕ್ರಮಗಳಿಂದಾಗಿ ದೇಶದಲ್ಲಿ ಬಡತನವು ಗಣನೀಯವಾಗಿ ಕಡಿಮೆಯಾಗಿದೆ ಮತ್ತು ತಳಮಟ್ಟದಲ್ಲಿರುವ ಜನಸಂಖ್ಯೆಯ ಪೈಕಿ ಶೇ.5ರಿಂದ 10ರಷ್ಟು ಮಂದಿಯ ಖರೀದಿ ವೆಚ್ಚದಲ್ಲಿ ತೀವ್ರ ಏರಿಕೆಯಾಗಿದೆ ಎಂದು 2025-26ನೇ ಸಾಲಿನ ಆರ್ಥಿಕ ಸಮೀಕ್ಷೆ ತಿಳಿಸಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದು, ದೇಶದ ಒಟ್ಟು ಆರ್ಥಿಕ ಬೆಳವಣಿಗೆ (ಜಿಡಿಪಿ)ದರದ ಕುರಿತು ವಿವರಗಳನ್ನು ನೀಡಿದರು.

2026ರಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ.7.4ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆೆ. ಆದರೆ 2027ರಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ.6.8ರಿಂದ ಶೇ.7.2ರವರೆಗೆ ಇರಲಿದೆ. ಆದಾಗ್ಯೂ ಇದು ಐಎಂಎಫ್ ಹಾಗೂ ವಿಶ್ವಬ್ಯಾಂಕ್‌ನ ಅಂದಾಜಿಗಿಂತ ತೀರಾ ಅಧಿಕವಾಗಿದೆ ಎಂದು ವರದಿ ತಿಳಿಸಿದೆ. ಇದರೊಂದಿಗೆ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೆಂಬ ಸ್ಥಾನಮಾನವನ್ನು ಭಾರತವು ಮತ್ತೊಮ್ಮೆ ದೃಢಪಡಿಸಿದೆ.

2025-26ನೇ ಸಾಲಿನ ಮೊದಲಾಧರ್ ದಲ್ಲಿ ರಫ್ತಿನ ಪ್ರಮಾಣವು 22.2 ಶತಕೋಟಿ ಡಾಲರ್ ಆಗಿದೆ. ಎಲೆಕ್ಟ್ರಾನಿಕ್ ವಲಯವು ಎರಡನೇ ಅತಿ ದೊಡ್ಡ ರಫ್ತುದಾರನಾಗಿದೆ.

ಹೂಡಿಕೆ ಹಾಗೂ ಉತ್ಪಾದನಾ ವಲಯಗಳು ದೇಶದ ಆರ್ಥಿಕತೆಗೆ ಬಲತುಂಬಿರುವುದಾಗಿ ವರದಿ ಹೇಳಿದೆ.

ಜಗತ್ತಿನಾದ್ಯಂತ ಹಲವಾರು ದೇಶಗಳು ಆರ್ಥಿಕ ಹಿಂಜರಿಕೆಯನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ಭಾರತದ ಈ ಸಾಧನೆ ಗಮನಾರ್ಹವೆಂದು ವರದಿ ಹೇಳಿದೆ. ಹೆಚ್ಚುತ್ತಿರುವ ಹೂಡಿಕೆ, ಸ್ಥಿರವಾದ ಹಣದುಬ್ಬರ, ಉತ್ಪಾದನಾ ವಲಯಗಳು, ಮೂಲಸೌಕರ್ಯಗಳು,ಸೇವಾ ವಲಯಗಳು ಹಾಗೂ ವಿತ್ತೀಯ ವ್ಯವಸ್ಥೆಯಲ್ಲಿ ಸಂರಚನಾತ್ಮಕ ಸುಧಾಣೆಗಳು ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ ಎಂದು ವರದಿಯು ತಿಳಿಸಿದೆ.

ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತನಾಗೇಶ್ವರನ್ ನೇತೃತ್ವದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಕೇಂದ್ರ ಬಜೆಟ್ ಮಂಡನೆಗೆ ಮುಂಚಿತವಾಗಿ ಪ್ರಕಟಿಸಲಿರುವ ಈ ಸಮೀಕ್ಷೆಯು ಹಾಲಿ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಸ್ಥಿತಿಗತಿಯು ಹೇಗಿತ್ತು, ಮುಂದಿನ ಆರ್ಥಿಕ ವರ್ಷದಲ್ಲಿ ಅದು ಹೇಗಿರಬಹುದು ಎಂಬ ಬಗ್ಗೆ ಬೆಳಕು ಚೆಲ್ಲುತ್ತದೆ.

ಕೇಂದ್ರ ಸರಕಾರ 2026-27ನೇ ಸಾಲಿನ ಬಜೆಟ್ ಫೆಬ್ರವರಿ 1ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ.

ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು...

2025-26ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ 8.7 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದು, ದೇಶದಲ್ಲಿ ಉದ್ಯೋಗಿಗಳ ಸಂಖ್ಯೆಯು 56.2 ಕೋಟಿಗೆ ಏರಿಕೆಯಾಗಿದೆ. ಆದರೆ ನಿರುದ್ಯೋಗ ಪ್ರಮಾಣವು ಈಗಲೂ ಶೇ.5ರಷ್ಟರಲ್ಲಿಯೇ ಉಳಿದುಕೊಂಡಿದೆ.

ಬೊಜ್ಜಿನ ಸಮಸ್ಯೆಯು ಎಲ್ಲಾ ವಯೋವರ್ಗದವರನ್ನೂ ಬಾಧಿಸುತ್ತಿದ್ದು, ಪಥ್ಯಾಹಾರ ಸೇವನೆಯಲ್ಲಿ ಸುಧಾರಣೆಗಳನ್ನು ತರುವ ಅಗತ್ಯವಿದೆ.

ಕೃಷಿ ವಲಯವು ಬೆಳವಣಿಗೆಯನ್ನು ಕಾಣುತ್ತಿರುವ ಹೊರತಾಗಿಯೂ ಅದು ಹವಾಮಾನ, ನೀರಿನ ಸಮಸ್ಯೆಗಳನ್ನು ಎದುರಿಸುತ್ತಿದೆ.

ಆಟೋಮೊಬೈಲ್ ರಫ್ತು ವಲಯವು ಬಲವಾದ ಬೆಳವಣಿಗೆಯನ್ನು ಕಂಡಿದ್ದು, ಪ್ರಯಾಣಿಕ, ವಾಣಿಜ್ಯ, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕಾ ವಲಯಗಳಿಂದ 50.30 ಲಕ್ಷ ವಾಹನಗಳು ರಫ್ತಾಗಿವೆ.

55 ಕೋಟಿಗೂ ಅಧಿಕ ಜನಧನ ಖಾತೆಗಳನ್ನು ತೆರೆಯಲಾಗಿದೆ.

ಅಧಿಕವೇಗದ ರಸ್ತೆಕಾರಿಡಾರ್‌ಗಳನ್ನು ಸುಮಾರು 10 ಪಟ್ಟು ಅಂದರೆ 5364 ಕಿ.ಮೀ.ನಷ್ಟು ವಿಸ್ತರಿಸಲಾಗಿದೆ. 2014ರಲ್ಲಿ ದೇಶದಲ್ಲಿ 74 ವಿಮಾನನಿಲ್ದಾಣಗಳಿದ್ದರೆ 2025ರಲ್ಲಿ 164ಕ್ಕೇರಿದೆ. ಜಗತ್ತಿನ ಮೂರನೇ ಅತಿ ದೊಡ್ಡ ಅಂತರ್‌ದೇಶೀಯ ವಾಯುಯಾನ ಮಾರುಕಟ್ಟೆಯಾಗಿ ಜಗತ್ತು ಹೊರಹೊಮ್ಮಿದೆ.

2025ರಲ್ಲಿ ವಿಶಿಷ್ಟ ಹೂಡಿಕೆದಾರರ ಸಂಖ್ಯೆಯು 12 ಕೋಟಿಯ ಗಡಿಯನ್ನು ದಾಟಿದ್ದು, ಅವರಲ್ಲಿ ಶೇ.25ರಷ್ಟು ಮಂದಿ ಮಹಿಳೆಯರು.

2026ರ ಜನವರಿ 16ರ ವೇಳೆಗೆ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು 701.4 ಶತಕೋಟಿ ಡಾಲರ್‌ಗೆ ಹೆಚ್ಚಿದೆ.

2025ರ ಎಪ್ರಿಲ್-ಡಿಸೆಂಬರ್‌ವರೆಗೆ ಆಂತರಿಕ ಹಣದುಬ್ಬರವು ಸರಾಸರಿ 1.7 ಶೇಕಡ ಆಗಿದೆ.

2024-25ರ ಸಾಲಿನಲ್ಲಿ ಭಾರತದ ಆಹಾರಧಾನ್ಯ ಉತ್ಪಾದನೆಯು 3577.3 ಲಕ್ಷ ಮೆಟ್ರಿಕ್ ಟನ್‌ಗೆ ತಲುಪಿದ್ದು, ಹಿಂದಿನ ಸಾಲಿಗಿಂತ 254.3 ಲಕ್ಷ ಮೆಟ್ರಿಕ್ ಟನ್‌ನಷ್ಟು ಹೆಚ್ಚಾಗಿದೆ.

ಪಿಎಂ-ಕಿಸಾನ್ ಯೋಜನೆಯು ಆರಂಭವಾದಾಗಿನಿಂದ ಈವರೆಗೆ 4.09 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ಬಿಡುಗಡೆಗೊಳಿಸಲಾಗಿದೆ.

ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಹಂತಗಳಲ್ಲಿ ಒಟ್ಟು ದಾಖಲಾತಿ ಪ್ರಮಾಣವು ಕ್ರಮವಾಗಿ 90.9, 90.3 ಹಾಗೂ 78.7 ಆಗಿದೆ.

ಐರೋಪ್ಯ ಒಕ್ಕೂಟದ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದವು ಭಾರತದ ಉತ್ಪಾದನಾ ಸ್ಮರ್ಧಾತ್ಮಕತೆಯನ್ನು, ವ್ಯೆಹಾತ್ಮಕ ಸಾಮರ್ಥ್ಯವನ್ನು ಬಲಪಡಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News