"ಲಡಾಖ್ ಜನರು ಸೇನೆಗೆ ನೆರವು ನೀಡುವುದಿಲ್ಲ ಎಂದು ಹೇಳಿಲ್ಲ": ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಸೋನಂ ವಾಂಗ್ಚುಕ್
ಸೋನಂ ವಾಂಗ್ಚುಕ್ , ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ: ಸರಕಾರವನ್ನು ಟೀಕಿಸುವುದು ಹಾಗೂ ಪ್ರತಿಭಟಿಸುವುದು ನನ್ನ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ಇಂತಹ ಅನಿಸಿಕೆಗಳು ದೇಶದ ಭದ್ರತೆಗೆ ಧಕ್ಕೆ ತಂದು ನನ್ನನ್ನು ಬಂಧಿಸಲು ಕಾರಣವಾಗುವುದಿಲ್ಲ ಎಂದು ಲಡಾಖ್‌ನ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಗುರುವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದರು.
ನ್ಯಾ.ಅರವಿಂದ್ ಕುಮಾರ್ ಮತ್ತು ನ್ಯಾ ಪಿ.ಬಿ.ವರಾಳೆ ನ್ಯಾಯಪೀಠದೆದುರು ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಲಡಾಖ್ ಪರಿಸರವನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಹಾಗೂ ಈ ಪ್ರಾಚೀನ ಪರಿಸರ ಹಾಳಾಗುವುದು ಅಲ್ಲಿನ ಜನರಿಗೆ ಬೇಕಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಸೋನಂ ವಾಂಗ್ಚುಕ್ ವಿರುದ್ಧ ಯಾವುದೇ ಉಲ್ಲಂಘನೆಯ ಆರೋಪವಿಲ್ಲ ಎಂದು ಅವರು ತಿಳಿಸಿದರು.
ಸೋನಂ ವಾಂಗ್ಚುಕ್ ಅವರ ವಿರುದ್ಧ ಉಲ್ಲೇಖಿಸಲಾಗಿರುವ ಬಹುತೇಕ ಹೇಳಿಕೆಗಳು ಅವರ ಬಗ್ಗೆ ತಪ್ಪಾಗಿ ಆರೋಪಿಸಲಾಗಿದೆ. ಅವರ ಹೇಳಿಕೆಗಳನ್ನು ಸಮರ್ಪಕವಾಗಿ ಗ್ರಹಿಸದೆ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಅವರು ವಾದಿಸಿದರು.
ಸೋನಂ ವಾಂಗ್ಚುಕ್ ಅವರನ್ನು ಬಂಧನ ಮಾಡಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಲಡಾಖ್ ಗೆ ರಾಜ್ಯದ ಸ್ಥಾನಮಾನ ನೀಡಬೇಕು ಹಾಗೂ ಲಡಾಖ್ ಅನ್ನು ಆರನೆಯ ಪರಿಚ್ಛೇದದಡಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 2025ರಲ್ಲಿ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ಸೋನಂ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ.
ಗೀತಾಂಜಲಿ ಆಂಗ್ಮೊ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಕಪಿಲ್ ಸಿಬಲ್, ಅವರನ್ನು ಬಂಧಿಸಲು ಉಲ್ಲೇಖಿಸಲಾಗಿರುವ ವಿಡಿಯೊಗಳಲ್ಲಿ ಅವರ ವಿರುದ್ಧ ಏನೂ ಸಾಕ್ಷಿ ಇಲ್ಲ ಎಂದು ವಾದಿಸಿದರು.
“ಲಡಾಖ್ ಜನರು ಸೇನೆಗೆ ನೆರವು ನೀಡುವುದಿಲ್ಲ" ಎಂದು ಸೋನಂ ವಾಂಗ್ಚುಕ್ ನೀಡಿರುವ ಹೇಳಿಕೆಯನ್ನು ನ್ಯಾಯಾಲಯ ಪ್ರಸ್ತಾಪಿಸಿದಾಗ, “ಇದೇ ಸಮಸ್ಯೆಯಾಗಿದೆ. ಅವು ಬಂಧಿಸುವ ಅಧಿಕಾರಿಗಳನ್ನು ದಾರಿ ತಪ್ಪಿಸಿವೆ. ಇದನ್ನು ನನ್ನ ಕಕ್ಷಿದಾರ ಹೇಳಿಯೇ ಇಲ್ಲ. ಅವರು ಏನು ಹೇಳಿದ್ದಾರೆ ಎಂಬುದನ್ನು ನಾನು ತೋರಿಸಬಲ್ಲೆ. ಈ ಪ್ರಕರಣದಲ್ಲಿ ಈ ವಿಡಿಯೊ ಜೂನ್ 8, 2025ರದ್ದು. ಬಂಧನದ ಆದೇಶ ಹೊರಡಿಸಿರುವುದು ಸೆಪ್ಟೆಂಬರ್ 26ರಂದು. ಇದೇ ಆತಂಕವಾಗಿದ್ದರೆ, ಅವರನ್ನು ಜೂನ್ ತಿಂಗಳಲ್ಲೇ ಬಂಧಿಸಬಹುದಿತ್ತು” ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.
ಸಂವಹನ ಕೊರತೆಯಿಂದ ಭಾಷೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು, ಉದ್ದೇಶಪೂರ್ವಕ ಅಸ್ಪಷ್ಟತೆಯಿಂದ ಸೇನೆಗೆ ಸಹಾಯ ಮಾಡುವುದಿಲ್ಲ ಎಂಬ ಆರೋಪವನ್ನು ಮಾಡಲಾಗಿದೆ ಎಂದೂ ಕಪಿಲ್ ಸಿಬಲ್ ವಾದಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಅಗತ್ಯವಿದ್ದರೆ ಸೋನಂ ವಾಂಗ್ಚುಕ್ ಅವರಿಗೆ ತಕ್ಷಣವೇ ವೈದ್ಯಕೀಯ ಆರೈಕೆ ಒದಗಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿತು.