×
Ad

ಬಿಹಾರ SIR | ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Update: 2026-01-29 22:07 IST

Photo Credit : PTI 

ಹೊಸದಿಲ್ಲಿ: ಬಿಹಾರದಲ್ಲಿ ನಡೆದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ಸರಕಾರೇತರ ಸಂಸ್ಥೆ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಗಳ ಕುರಿತ ತೀರ್ಪನ್ನು ಗುರುವಾರ ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.

ಬಿಹಾರದಲ್ಲಿನ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ, ಪ್ರಶಾಂತ್ ಭೂಷಣ್ ಹಾಗೂ ಗೋಪಾಲ್ ಶಂಕರ್ ನಾರಾಯಣ್ ಸೇರಿದಂತೆ ವಕೀಲರ ತಂಡ ಮಂಡಿಸಿದ ವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆಯನ್ನು ಮುಕ್ತಾಯಗೊಳಿಸಿತು.

ಚುನಾವಣಾ ಆಯೋಗದ ಪರವಾಗಿ ರಾಕೇಶ್ ದ್ವಿವೇದಿ ಹಾಗೂ ಮಣೀಂದರ್ ಸಿಂಗ್ ವಾದ ಮಂಡಿಸಿದರು.

ತೀರ್ಪನ್ನು ಕಾಯ್ದಿರಿಸುವ ಮೊದಲು, ನ್ಯಾಯಾಲಯವು ಅರ್ಜಿದಾರರ ಪರವಾಗಿ ಸಲ್ಲಿಸಲಾದ ತಿದ್ದುಪಡಿ ವಾದಗಳನ್ನು ಆಲಿಸಿತು.

ಕಳೆದ ವರ್ಷದ ಆಗಸ್ಟ್ 12ರಂದು ನ್ಯಾಯಾಲಯವು ಪ್ರಕರಣದ ಕೊನೆಯ ಹಂತದ ವಾದ–ಪ್ರತಿವಾದಗಳಿಗೆ ಚಾಲನೆ ನೀಡಿತ್ತು. ಈ ವೇಳೆ, ಮತಪಟ್ಟಿಗಳಲ್ಲಿ ಯಾರದಾದರೂ ಹೆಸರು ಸೇರ್ಪಡೆ ಮಾಡುವ ಅಥವಾ ತೆಗೆದುಹಾಕುವ ಸಾಂವಿಧಾನಿಕ ವ್ಯಾಪ್ತಿ ಚುನಾವಣಾ ಆಯೋಗಕ್ಕೇ ಸೇರಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಈ ಸಂದರ್ಭ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡ ಭಾರತೀಯ ಚುನಾವಣಾ ಆಯೋಗ, ಆಧಾರ್ ಕಾರ್ಡ್ ಹಾಗೂ ಮತದಾರರ ಚೀಟಿಯನ್ನು ನಾಗರಿಕತ್ವದ ತೃಪ್ತಿದಾಯಕ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ವಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News