×
Ad

ಮಿಯಾ ಮುಸ್ಲಿಮರ ಕುರಿತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ಸಂವಿಧಾನ ವಿರೋಧಿ: ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್

Update: 2026-01-29 19:07 IST

  ಗೋವಿಂದ್ ಮಾಥುರ್ , ಹಿಮಂತ ಬಿಸ್ವಾ ಶರ್ಮಾ | Photo Credit : PTI 

ಹೊಸದಿಲ್ಲಿ: ಮಿಯಾ ಮುಸ್ಲಿಮರು ಅಸ್ಸಾಂ ತೊರೆಯುವ ಮಟ್ಟಿಗೆ ಅವರಿಗೆ ಕಿರುಕುಳ ನೀಡಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನೀಡಿರುವ ಹೇಳಿಕೆ ತೀವ್ರವಾಗಿ ಖಂಡನೀಯವಾಗಿದ್ದು, ಅದು ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಹೇಳಿದ್ದಾರೆ.

ಬುಧವಾರ ಪ್ರಕಟಿಸಿದ ಹೇಳಿಕೆಯಲ್ಲಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಆಗಾಗ್ಗೆ ಇಂತಹ ಬೇಜವಾಬ್ದಾರಿ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಗೋವಿಂದ್ ಮಾಥುರ್ ಕಳವಳ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಯೊಬ್ಬರು ಧರ್ಮದ ಆಧಾರದ ಮೇಲೆ ನಾಗರಿಕರನ್ನು ವಿಭಜಿಸಲು ಯತ್ನಿಸುವುದು ಕೇವಲ ಬೇಸರದ ಸಂಗತಿಯಲ್ಲ, ಅದು ಅತಿರೇಕದ ಸಂಗತಿಯಾಗಿದೆ. ಇಂತಹ ಹೇಳಿಕೆಗಳು ನಾಗರಿಕ ನಿಯಮಗಳ ಉಲ್ಲಂಘನೆಯಾಗಿದ್ದು, ಭಾರತದ ಸಂವಿಧಾನದ ಚೈತನ್ಯದ ಮೇಲಿನ ದಾಳಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಬಹುಸಂಖ್ಯಾತ ಭಾವನೆಗಳಿಂದಲ್ಲ, ಸಾಂವಿಧಾನಿಕ ನೈತಿಕತೆಯಿಂದ ಆಳಲ್ಪಡುವ ರಾಷ್ಟ್ರವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಂವಿಧಾನದ ವಿಧಿ 14 ಕಾನೂನಿನ ಮುಂದೆ ಸಮಾನತೆಯನ್ನು ಖಾತರಿಪಡಿಸುತ್ತದೆ, ವಿಧಿ 15 ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ ಹಾಗೂ ವಿಧಿ 21 ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಜೀವಿಸುವ ಹಕ್ಕನ್ನು ರಕ್ಷಿಸುತ್ತದೆ ಎಂದು ಅವರು ನೆನಪಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಅವರು ಸಂವಿಧಾನವನ್ನು ಎತ್ತಿಹಿಡಿಯುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಮಾತುಗಳು ವೈಯಕ್ತಿಕ ಅಭಿಪ್ರಾಯಗಳಾಗಿ ಉಳಿಯುವುದಿಲ್ಲ; ಅವು ರಾಜ್ಯದ ಆಡಳಿತವನ್ನು ಹೊತ್ತಿರುತ್ತವೆ. ಭಯ, ಬಹಿಷ್ಕಾರ ಅಥವಾ ದ್ವೇಷವನ್ನು ಹರಡುವಂತಹ ಹೇಳಿಕೆಗಳನ್ನು ನೀಡುವ ಮೂಲಕ ಅವರು ಭಾರತೀಯ ಗಣರಾಜ್ಯದ ಅಡಿಪಾಯವನ್ನೇ ಹಾಳುಮಾಡುತ್ತಿದ್ದಾರೆ ಎಂದು ಗೋವಿಂದ್ ಮಾಥುರ್ ಹೇಳಿದ್ದಾರೆ.

ಮುಖ್ಯಮಂತ್ರಿಯ ಕೋಮು ಸ್ವಭಾವದ ಕ್ರಮಗಳು ಸಮಾಜದಲ್ಲಿ ಪೂರ್ವಾಗ್ರಹವನ್ನು ಸಾಮಾನ್ಯಗೊಳಿಸುತ್ತಿದ್ದು, ದ್ವೇಷ ಮತ್ತು ವೈಷಮ್ಯವನ್ನು ಉತ್ತೇಜಿಸುತ್ತಿವೆ. ಧಾರ್ಮದ ಆಧಾರದ ಮೇಲೆ ನಾಗರಿಕರನ್ನು ವಿಭಜಿಸುವ ನಾಯಕರು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹರಲ್ಲ ಎಂದು ಅವರು ಹೇಳಿದ್ದಾರೆ.

ವಿಭಜನೆಯ ಕುರಿತು ಯಾವಾಗಲೂ ತೊಡಗಿಕೊಳ್ಳುವ ಮೂಲಕ ಅಸ್ಸಾಂ ಮುಖ್ಯಮಂತ್ರಿ ಸಾಂವಿಧಾನಿಕ ನೈತಿಕತೆ, ಒಕ್ಕೂಟ ವ್ಯವಸ್ಥೆಯ ಜವಾಬ್ದಾರಿ ಹಾಗೂ ಭಾರತದ ಬಹುತ್ವದ ತತ್ತ್ವಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಸಾಂವಿಧಾನಿಕ ಹುದ್ದೆಯಲ್ಲಿರುವವರು ನಿಷ್ಪಕ್ಷಪಾತತೆ ಮತ್ತು ಸಮಾನತೆಯಿಂದ ವಿಮುಖರಾದಾಗ, ಅವರು ಅಧಿಕಾರದಲ್ಲೇ ಮುಂದುವರಿಯುವ ಅರ್ಹತೆಯನ್ನು ಪ್ರಶ್ನಿಸುವುದು ಸಹಜವಾಗುತ್ತದೆ ಎಂದು ಗೋವಿಂದ್ ಮಾಥುರ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಬಲವು ಏಕತೆ, ತರ್ಕ ಮತ್ತು ಕಾನೂನಿನ ಆಳ್ವಿಕೆಯಲ್ಲಿ ಅಡಕವಾಗಿದೆ; ಕೋಮು ಧ್ರುವೀಕರಣದಲ್ಲಿ ಅಲ್ಲ ಎಂದು ಅವರು ಹೇಳಿದ್ದಾರೆ.

ನಮ್ಮ ಕಾನೂನಿನ ಅಡಿಯಲ್ಲಿ ಅಪರಾಧವಾಗಿರುವ ಕೋಮು ದ್ವೇಷವನ್ನು ಹರಡುವಂತಹ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ, ಅಸ್ಸಾಂ ಮುಖ್ಯಮಂತ್ರಿಯ ರಾಜೀನಾಮೆಗೆ ಒತ್ತಾಯಿಸುವುದು ಇದು ಸಕಾಲವಾಗಿದೆ ಎಂದು ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News