ಹೊಸದಿಲ್ಲಿ|ಪತಿಯಿಂದ ಹಲ್ಲೆಗೊಳಗಾಗಿದ್ದ ಮಹಿಳಾ ಕಾನ್‌ಸ್ಟೇಬಲ್ ಮೃತ್ಯು
ಅಂಕುರ್ ಚೌಧರಿ , ಕಾಜಲ್ | Photo Credit : NDTV
ಹೊಸದಿಲ್ಲಿ, ಜ. 29: ತನ್ನ ಪತಿಯಿಂದ ಅಮಾನುಷವಾಗಿ ಹಲ್ಲೆಗೊಳಗಾದ ಐದು ದಿನಗಳ ಬಳಿಕ, ದಿಲ್ಲಿ ಪೊಲೀಸ್‌ನ ಮಹಿಳಾ ಕಾನ್‌ಸ್ಟೇಬಲ್ ಒಬ್ಬರು ಮಂಗಳವಾರ ಉತ್ತರಪ್ರದೇಶದ ಘಾಜಿಯಾಬಾದ್‌ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ದಿಲ್ಲಿ ಪೊಲೀಸ್ ವಿಶೇಷ ಘಟಕ ‘ಸ್ಪೆಶಲ್ ವೆಪನ್ಸ್ ಆ್ಯಂಡ್ ಟ್ಯಾಕ್ಟಿಕ್ಸ್’ (ಸ್ವಾತ್)ನ ಕಮಾಂಡೊ 27 ವರ್ಷದ ಕಾಜಲ್ ಎಂಬುದಾಗಿ ಗುರುತಿಸಲಾಗಿದೆ.
ಆರೋಪಿ ಪತಿ ಅಂಕುರ್ ಚೌಧರಿ ಮಹಿಳೆಗೆ ಡಂಬ್‌ಬೆಲ್‌ನಿಂದ ಹೊಡೆದು ಅವರ ತಲೆಯನ್ನು ಮನೆಯ ಗೋಡೆಗೆ ಅಪ್ಪಳಿಸಿದನು ಎಂಬುದಾಗಿ ಆರೋಪಿಸಲಾಗಿದೆ.
ತೀವ್ರ ತಲೆ ಗಾಯಕ್ಕೆ ಒಳಗಾದ ಮಹಿಳೆಯ ಮೆದುಳು ನಿಷ್ಕ್ರಿಯವಾಗಿದೆ ಎಂಬುದಾಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದರು.
ವರದಕ್ಷಿಣೆಯಾಗಿ ತನಗೆ ಹಣ ಮತ್ತು ಕಾರು ನೀಡುವಂತೆ ಗಂಡ ಕಾಜಲ್‌ಗೆ ಕಿರುಕುಳ ನೀಡುತ್ತಿದ್ದನು ಎಂದು ಆಕೆಯ ಕುಟುಂಬಿಕರು ಆರೋಪಿಸಿದ್ದಾರೆ.
ಕಾಜಲ್ ಮತ್ತು ಅಂಕುರ್ ನಾಲ್ಕು ವರ್ಷಗಳ ಪ್ರೇಮದ ಬಳಿಕ 2023 ನವೆಂಬರ್‌ನಲ್ಲಿ ವಿವಾಹವಾಗಿದ್ದರು. ಅವರಿಗೆ ಒಂದೂವರೆ ವರ್ಷದ ಗಂಡು ಮಗುವಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.