×
Ad

77ನೇ ಗಣರಾಜ್ಯೋತ್ಸವ | ಸಂವಿಧಾನವನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಕರೆ

Update: 2026-01-26 20:50 IST

Photo Credit : PTI

ಹೊಸದಿಲ್ಲಿ, ಜ.26: ಭಾರತದ 77ನೇ ಗಣರಾಜ್ಯೋತ್ಸವ ದಿನವಾದ ಸೋಮವಾರ ಕಾಂಗ್ರೆಸ್, ದೇಶದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ಶಿಲ್ಪಿಗಳಿಗೆ ಗೌರವ ಸಲ್ಲಿಸಿದೆ. ಅವರ ತ್ಯಾಗ ಮತ್ತು ದೂರದೃಷ್ಟಿಯು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಲ್ಲಿ ಬೇರೂರಿರುವ ಗಣರಾಜ್ಯದ ಅಡಿಪಾಯವನ್ನು ಹಾಕಿತು ಎಂದು ಪಕ್ಷವು ಸ್ಮರಿಸಿದೆ.

‘ನಮ್ಮ ಸ್ವಾತಂತ್ರ್ಯವೀರರ ಕೆಚ್ಚೆದೆಯ ಹೋರಾಟ ಮತ್ತು ಅಮರ ಪರಂಪರೆಯು ನಮ್ಮ ಗಣರಾಜ್ಯದ ಹಾದಿಯನ್ನು ಸದಾಕಾಲ ಬೆಳಗಿಸುತ್ತಿರಲಿ’ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಕಾಂಗ್ರೆಸ್, ಎಲ್ಲ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದೆ.

ಎಕ್ಸ್ ಪೋಸ್ಟ್‌ನಲ್ಲಿ ಭಾರತೀಯರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಈ ವರ್ಷದ ಮಹತ್ವವನ್ನು ಪ್ರತಿಬಿಂಬಿಸುತ್ತ, ‘ಭಾರತೀಯ ಸಂವಿಧಾನವು ಅಂಗೀಕಾರಗೊಂಡು ಇಂದಿಗೆ 76 ವರ್ಷಗಳು ಪೂರೈಸಿವೆ. ಸಂವಿಧಾನವು ನಮ್ಮ ಆತ್ಮಸಾಕ್ಷಿಯ ಶಾಶ್ವತ ರಕ್ಷಕ ಮತ್ತು ಭಾರತೀಯ ಗಣರಾಜ್ಯದ ಆತ್ಮವಾಗಿದೆ’ ಎಂದು ಹೇಳಿದ್ದಾರೆ.

ಸಂವಿಧಾನದ ರಕ್ಷಣೆಗಾಗಿ ಸದಾ ದೃಢವಾಗಿ ನಿಲ್ಲುವಂತೆ ನಾಗರಿಕರನ್ನು ಆಗ್ರಹಿಸಿರುವ ಅವರು, ‘ನಮ್ಮ ಸಂವಿಧಾನವನ್ನು ರಕ್ಷಿಸಲು ಪ್ರತಿಯೊಂದು ತ್ಯಾಗಕ್ಕೂ ನಾವು ಸಿದ್ಧರಾಗಿರೋಣ. ಇದು ನಮ್ಮ ಪೂರ್ವಜರ ಧೀರೋದಾತ್ತ ತ್ಯಾಗಗಳಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ದೇಶದ ಜನರಿಗೆ ತನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದು, ಸಂವಿಧಾನವು ಭಾರತೀಯ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ ಎಂದು ಒತ್ತಿ ಹೇಳಿದ್ದಾರೆ. ‘ನಮ್ಮ ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ಶ್ರೇಷ್ಠವಾದ ಆಯುಧವಾಗಿದೆ. ಅದು ನಮ್ಮ ಧ್ವನಿ, ನಮ್ಮ ರಕ್ಷಣಾ ಕವಚ ಮತ್ತು ನಮ್ಮ ಹಕ್ಕುಗಳ ರಕ್ಷಕನಾಗಿದೆ’ ಎಂದು ಎಕ್ಸ್‌ನಲ್ಲಿ ಅವರು ಬರೆದಿದ್ದಾರೆ.

ಭಾರತೀಯ ಗಣರಾಜ್ಯದ ಶಕ್ತಿಯು ಸಮಾನತೆ, ಸಾಮರಸ್ಯ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ತತ್ವಗಳಲ್ಲಿದೆ ಎಂದು ಒತ್ತಿ ಹೇಳಿರುವ ರಾಹುಲ್, ‘ಸಂವಿಧಾನದ ರಕ್ಷಣೆ ಎಂದರೆ ಭಾರತೀಯ ಗಣರಾಜ್ಯದ ರಕ್ಷಣೆ. ಅದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳಿಗೆ ನಾವು ಸಲ್ಲಿಸಬಹುದಾದ ಅತ್ಯುನ್ನತ ಗೌರವವಾಗಿದೆ’ ಎಂದು ಹೇಳಿದ್ದಾರೆ.

ಎಲ್ಲ ಭಾರತೀಯರಿಗೆ ತನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ‘ಈ ದಿನ ನಮ್ಮ ಸಂವಿಧಾನವು ಜಾರಿಗೆ ಬಂದಿತ್ತು ಮತ್ತು ಪ್ರತಿ ಭಾರತೀಯನಿಗೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಭ್ರಾತೃತ್ವವನ್ನು ಖಚಿತಪಡಿಸಿತ್ತು’ ಎಂದಿದ್ದಾರೆ.

ಸಂವಿಧಾನವನ್ನು ಭಾರತದ 140 ಕೋಟಿ ಪ್ರಜೆಗಳನ್ನು ರಕ್ಷಿಸುವ ದೃಢವಾದ ಗುರಾಣಿ ಎಂದು ಬಣ್ಣಿಸಿರುವ ಅವರು, ‘ಅದನ್ನು ರಕ್ಷಿಸುವ ನಮ್ಮ ಸಂಕಲ್ಪವು ಬಂಡೆಯಂತೆ ಬಲವಾಗಿದೆ’ ಎಂದಿದ್ದಾರೆ. ಈ ಪರಂಪರೆಯನ್ನು ರಕ್ಷಿಸುವುದು ದೇಶದ ಪವಿತ್ರ ಕರ್ತವ್ಯವಾಗಿದೆ ಎಂದು ಅವರು ನೆನಪಿಸಿದ್ದಾರೆ.

ಈ ಭಾವನೆಗಳನ್ನು ಪ್ರತಿಧ್ವನಿಸಿರುವ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ ಅವರು, ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತ, ಅಚಲ ಸಂಕಲ್ಪದೊಂದಿಗೆ ಸಂವಿಧಾನವನ್ನು ರಕ್ಷಿಸುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News