ನ್ಯಾಯಾಲಯದ ಅನುಮತಿ ಇಲ್ಲದೆ ಪೊಲೀಸರು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ: Delhi ಹೈಕೋರ್ಟ್
ಮಲಬಾರ್ ಬ್ಯಾಂಕ್ ಖಾತೆಗಳ ಮುಟ್ಟುಗೋಲು ಕ್ರಮವನ್ನು ರದ್ದುಗೊಳಿಸಿದ ನ್ಯಾಯಾಲಯ
ದಿಲ್ಲಿ ಹೈಕೋರ್ಟ್(PTI) , ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್(Malabar Gold And Diamonds)
ಹೊಸದಿಲ್ಲಿ: ಸಕ್ಷಮ ನ್ಯಾಯಾಲಯದ ಅನುಮತಿ ಇಲ್ಲದೆ ಪೊಲೀಸರು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್ ತೀರ್ಪು ನೀಡಿದೆ.
ತನ್ನ ಬ್ಯಾಂಕ್ ಖಾತೆಗಳ ಮುಟ್ಟುಗೋಲು ಕ್ರಮವನ್ನು ಪ್ರಶ್ನಿಸಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೈಂದರ್ ಕುಮಾರ್ ಕೌರವ್, “ಅಪರಾಧ ವಿಚಾರಣೆಯ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ನಿರ್ದೇಶಿಸಲ್ಪಟ್ಟ ಕ್ರಮವಾಗಿದೆ. ಆದರೆ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106ರ ಅಡಿ ಇಂತಹ ಕ್ರಮವನ್ನು ತೆಗೆದುಕೊಳ್ಳಲು ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ. ಈ ಸೆಕ್ಷನ್ ಅಡಿ ಪೊಲೀಸರು ಸ್ವತ್ತುಗಳನ್ನು ಸಾಕ್ಷ್ಯಗಳ ಉದ್ದೇಶಕ್ಕೆ ವಶಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆಯೇ ಹೊರತು, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಯಾವುದೇ ಅಧಿಕಾರವನ್ನು ನೀಡಿಲ್ಲ” ಎಂದು ಸ್ಪಷ್ಟಪಡಿಸಿದರು.
“ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 107ರ ಅಡಿ ಅಪರಾಧ ವಿಚಾರಣೆಯ ಸಂದರ್ಭದಲ್ಲಿ ನೀಡುವ ನಿರ್ದೇಶನದನ್ವಯ ಮಾತ್ರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸೂಚಿಸಲಾದ ವಿಧಿವಿಧಾನದ ಸುರಕ್ಷತೆಯಡಿ ಕಡ್ಡಾಯವಾಗಿ ಸಕ್ಷಮ ಮ್ಯಾಜಿಸ್ಟ್ರೇಟ್‌ಗಳ ಆದೇಶದನ್ವಯ ಮಾತ್ರ ಇಂತಹ ಕ್ರಮ ಕೈಗೊಳ್ಳಬಹುದು” ಎಂದು ನ್ಯಾಯಾಲಯ ಹೇಳಿದೆ.
ತನಿಖೆಯ ವೇಳೆ ಖಾತೆದಾರನು ಆರೋಪಿಯೂ ಅಲ್ಲದೆ ಅಥವಾ ಶಂಕಿತ ಆರೋಪಿಯೂ ಆಗಿರದಿದ್ದಾಗ, ಬ್ಯಾಂಕ್ ಖಾತೆಗಳನ್ನು ಅಸಮರ್ಪಕವಾಗಿ ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ಸ್ಥಗಿತಗೊಳಿಸುವುದು ಸ್ಪಷ್ಟವಾಗಿ ನಿರಂಕುಶ ಕ್ರಮವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಲಿಮಿಟೆಡ್‌ಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಈ ಆದೇಶ ನೀಡಿದೆ. ಮೂರನೇ ವ್ಯಕ್ತಿಗಳು ನಡೆಸಿದ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಪೊಲೀಸರು ರವಾನಿಸಿದ್ದ ಸಂವಹನವನ್ನು ಆಧರಿಸಿ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಲಿಮಿಟೆಡ್‌ನ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ಈ ಕ್ರಮವನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಲಿಮಿಟೆಡ್ ಕಂಪನಿ, ನಾವು ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದೇವೆ. ನಮ್ಮ ಹೆಸರು ಎಫ್‌ಐಆರ್‌ನಲ್ಲಿ ದಾಖಲಾಗಿಲ್ಲ ಅಥವಾ ತನಿಖೆಯ ಸಂದರ್ಭದಲ್ಲಿ ನಾವು ಆರೋಪಿಗಳೂ ಅಲ್ಲ ಎಂದು ವಾದಿಸಿತ್ತು. ಇದರ ಹೊರತಾಗಿಯೂ ಗಮನಾರ್ಹ ಮೊತ್ತವಿರುವ ವಿವಿಧ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಇದರಿಂದ ದೈನಂದಿನ ವ್ಯವಹಾರ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದು ಕಂಪನಿ ತಿಳಿಸಿತ್ತು.
ಈ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಲಿಮಿಟೆಡ್ ಕಂಪನಿಯ ಬ್ಯಾಂಕ್ ಖಾತೆಗಳ ಮುಟ್ಟುಗೋಲು ಕ್ರಮವನ್ನು ರದ್ದುಗೊಳಿಸಿದೆ.
ಸೌಜನ್ಯ: barandbench.com