ತಿರುಮಪರಂಕುಂದ್ರಂ ದೀಪೋತ್ಸವ: ಪುರಾತತ್ವ ಇಲಾಖೆಯ ಅನುಮತಿ ಕಡ್ಡಾಯವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ: ಭಾರತೀಯ ಪುರಾತತ್ವ ಇಲಾಖೆ ಹಾಗೂ ಪೊಲೀಸರೊಂದಿಗೆ ಮುಂಚಿತ ಸಮಾಲೋಚನೆ ಮತ್ತು ಅನುಮತಿ ಪಡೆದ ಬಳಿಕವೇ ತಿರುಮಪರಂಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪೋತ್ಸವ ನಡೆಸಬೇಕು ಎಂದು ಜನವರಿ 6ರಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಮೂಲ ಅರ್ಜಿದಾರ ರಾಮ ರವಿಕುಮಾರ್ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಹೈಕೋರ್ಟ್ ನೀಡಿರುವ ಈ ತೀರ್ಪು, ಅರುಳ್ ಮಿಗು ಸುಬ್ರಮಣ್ಯ ಸ್ವಾಮಿ ದೇವಾಲಯದ ಮಾಲಕತ್ವ ಹಾಗೂ ನಿಯಂತ್ರಣದ ಕುರಿತು ಸಿವಿಲ್ ನ್ಯಾಯಾಲಯ ನೀಡಿರುವ ಪಾಲಿಸಲೇಬೇಕಾದ ತೀರ್ಪನ್ನು ಕಾನೂನುಬಾಹಿರವಾಗಿ ದುರ್ಬಲಗೊಳಿಸುತ್ತದೆ. ಜೊತೆಗೆ, ಇದು ಅತ್ಯಗತ್ಯ ಧಾರ್ಮಿಕ ಆಚರಣೆಯ ಕುರಿತು ಅನುಮತಿಯಿಲ್ಲದ ನ್ಯಾಯಾಂಗ ಸೂಚನೆಯಾಗಿದೆ ಎಂದು ಅರ್ಜಿದಾರ ರವಿಕುಮಾರ್ ಪರವಾಗಿ ವಕೀಲ ಜಿ. ಬಾಲಾಜಿ ನ್ಯಾಯಾಲಯದ ಮುಂದೆ ವಾದಿಸಿದ್ದಾರೆ.
ದೀಪೋತ್ಸವದ ವೇಳೆ ದೇವಾಲಯಕ್ಕೆ ದೀಪ ಹಚ್ಚುವ ಅಧಿಕಾರವಿದೆ ಎಂದು ನ್ಯಾಯಾಲಯ ಸಮ್ಮತಿಸಿದ್ದರೂ, ಅದು ಆಡಳಿತದ ಇಚ್ಛೆಗೆ ಒಳಪಟ್ಟಿರುವ ಷರತ್ತುಬದ್ಧ ಹಕ್ಕಾಗಿದೆ ಎಂದು ಹೇಳಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಇದಕ್ಕೂ ಮುನ್ನ, ಡಿಸೆಂಬರ್ 1, 2025ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ, ದೀಪೋತ್ಸವದಂದು ಕಾರ್ತಿಕ ದೀಪವನ್ನು ದೇವಾಲಯದ ಸ್ಥಳದಲ್ಲಿಯೇ ಹಚ್ಚಬೇಕು ಹಾಗೂ ಸಿಕಂದರ್ ಬಾದುಶಾ ದರ್ಗಾದ ಹೊರಗೆ ಗುರುತಿಸಿರುವ ಗಡಿಯೊಳಗೆ ಮಾತ್ರ ಈ ಕಾರ್ಯಕ್ರಮ ನಡೆಸಬೇಕು ಎಂದು ಆದೇಶಿಸಿತ್ತು.
ಜನವರಿ 6, 2026ರಂದು ಸಂಪ್ರದಾಯವನ್ನು ಸೈದ್ಧಾಂತಿಕವಾಗಿ ವಿಭಾಗೀಯ ನ್ಯಾಯಪೀಠ ಎತ್ತಿ ಹಿಡಿದರೂ, ಕೆಲವು ಶಾಸನಾತ್ಮಕ ನಿರ್ಬಂಧಗಳನ್ನು ವಿಧಿಸಿತ್ತು. ಕಾರ್ತಿಕ ದೀಪವನ್ನು ಹಚ್ಚುವ ಮೊದಲು ದೇವಾಲಯವು ಭಾರತೀಯ ಪುರಾತತ್ವ ಇಲಾಖೆಯನ್ನು ಸಂಪರ್ಕಿಸಬೇಕು. ಸಂರಕ್ಷಿತ ಸ್ಮಾರಕ ಎಂದು ಪರಿಗಣಿಸಲಾಗಿರುವ ಬೆಟ್ಟವನ್ನು ರಕ್ಷಿಸುವ ಸಲುವಾಗಿ ಭಾರತೀಯ ಪುರಾತತ್ವ ಇಲಾಖೆ ಷರತ್ತುಗಳನ್ನು ವಿಧಿಸಬಹುದು ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾದಿಗಳ ಸಂಖ್ಯೆಗೆ ನಿರ್ಬಂಧ ಹೇರಬಹುದು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.