×
Ad

ವಿ.ಎಸ್. ಅಚ್ಯುತಾನಂದ್‌ ಗೆ ಪದ್ಮವಿಭೂಷಣ ಪ್ರಶಸ್ತಿ: ಸಿಪಿಎಂ ಸ್ವಾಗತ

Update: 2026-01-26 21:43 IST

ವಿ.ಎಸ್. ಅಚ್ಯುತಾನಂದ್ | Photo Credit : ANI  

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದನ್ನು ಸೋಮವಾರ ಸಿಪಿಎಂ ಸ್ವಾಗತಿಸಿದ್ದು, ವಿ.ಎಸ್. ಅಚ್ಯುತಾನಂದ್ ಅವರ ಕುಟುಂಬದ ಸಂತೋಷವನ್ನು ನಾವು ಹಂಚಿಕೊಳ್ಳುತ್ತಿದ್ದೇವೆ ಎಂದು ಹೇಳಿದೆ.

ವಿ.ಎಸ್. ಅಚ್ಯುತಾನಂದ್ ಅವರ ಕುಟುಂಬವು ಈ ಪ್ರಶಸ್ತಿಯನ್ನು ಅಂಗೀಕರಿಸಿರುವುದರಿಂದ, ಈ ಗೌರವವನ್ನು ವಿರೋಧಿಸಲು ಯಾವುದೇ ಕಾರಣವಿಲ್ಲ ಎಂದು ಅದು ತಿಳಿಸಿದೆ.

ದೀರ್ಘಕಾಲದಿಂದ ಸರಕಾರಿ ಪ್ರಶಸ್ತಿಗಳನ್ನು ಸ್ವೀಕರಿಸದಿರುವ ನಿರ್ಧಾರವನ್ನು ಸಿಪಿಎಂ ಕೈಗೊಂಡಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಇಂತಹ ಪ್ರಶಸ್ತಿಗಳನ್ನು ನಿರಾಕರಿಸಿದ್ದ ಇ.ಎಂ.ಎಸ್. ನಂಬೂದರಿಪಾದ್, ಜ್ಯೋತಿ ಬಸು ಹಾಗೂ ಬುದ್ಧದೇವ್ ಭಟ್ಟಾಚಾರ್ಯರ ನಿರ್ಧಾರವು ಅವರ ವೈಯಕ್ತಿಕವಾಗಿತ್ತು ಹಾಗೂ ಆ ನಿರ್ಧಾರವನ್ನು ಪಕ್ಷ ಬೆಂಬಲಿಸಿತ್ತು ಎಂದು ಹೇಳಿದ್ದಾರೆ.

ತಮ್ಮ ತಂದೆಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದಕ್ಕೆ ಅವರ ಪುತ್ರ ಅರುಣ್ ಕುಮಾರ್ ರವಿವಾರ ಸಾಮಾಜಿಕ ಮಾಧ್ಯಮದಲ್ಲಿ ಹರ್ಷ ವ್ಯಕ್ತಪಡಿಸಿದ್ದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ವಿ. ಗೋವಿಂದನ್, “ಕಲೆ ಸೇರಿದಂತೆ ವಿವಿಧ ಸೇವಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದವರಿಗೆ ಸರಕಾರ ಹಲವು ಪ್ರಶಸ್ತಿಗಳನ್ನು ನೀಡುತ್ತದೆ. ಇ.ಎಂ.ಎಸ್. ನಂಬೂದರಿಪಾದ್ ಅವರನ್ನು ಕೇಳಿದಾಗ ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದರು. ಜ್ಯೋತಿ ಬಸು ಹಾಗೂ ಬುದ್ಧದೇವ್ ಭಟ್ಟಾಚಾರ್ಯರೂ ಅದನ್ನೇ ಮಾಡಿದ್ದರು. ವಿ.ಎಸ್. ಅಚ್ಯುತಾನಂದ್ ಅವರ ವಿಷಯಕ್ಕೆ ಸಂಬಂಧಿಸಿದಂತೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಅವರ ಕುಟುಂಬ ಇದನ್ನು ಸಂತೋಷದಿಂದ ಅಂಗೀಕರಿಸಿರುವುದರಿಂದ, ನಾವೂ ಅದನ್ನು ಒಪ್ಪಿಕೊಳ್ಳಬೇಕಿದೆ. ವಿಭಿನ್ನ ನಿಲುವು ತೆಗೆದುಕೊಳ್ಳಬೇಕಾದ ಯಾವುದೇ ಅಗತ್ಯವಿಲ್ಲ. ಕುಟುಂಬದವರ ಸಂತೋಷದಲ್ಲಿ ನಾವೂ ಭಾಗಿಯಾಗುತ್ತೇವೆ” ಎಂದು ಸ್ಪಷ್ಟಪಡಿಸಿದರು.

ಆದರೆ, ಇಂತಹುದೇ ಪುರಸ್ಕಾರಗಳನ್ನು ಈ ಹಿಂದೆ ತಿರಸ್ಕರಿಸುವ ನಿಲುವು ತೆಗೆದುಕೊಂಡಿದ್ದ ಸಿಪಿಎಂನ ಹಳೆಯ ನಿಲುವಿಗೆ ಇದು ವ್ಯತಿರಿಕ್ತವಾಗಿದೆ. 1992ರಲ್ಲಿ ಇ.ಎಂ.ಎಸ್. ನಂಬೂದರಿಪಾದ್, 2008ರಲ್ಲಿ ಜ್ಯೋತಿ ಬಸು ಹಾಗೂ 2022ರಲ್ಲಿ ಬುದ್ಧದೇವ್ ಭಟ್ಟಾಚಾರ್ಯ ಸರಕಾರಿ ಪುರಸ್ಕಾರಗಳನ್ನು ನಿರಾಕರಿಸಿದ್ದರು. ಈ ನಿಲುವನ್ನು ಅವರ ಮಾತೃಪಕ್ಷ ಸಿಪಿಎಂ ಕೂಡಾ ಬೆಂಬಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News