ಉ.ಪ್ರ.: ದಿಲ್ಲಿ-ಸಹಾರ್ಸ ವೈಶಾಲಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ 19 ಮಂದಿಗೆ ಗಾಯ
Update: 2023-11-16 21:42 IST
Photo: PTI
ಲಕ್ನೊ: ದಿಲ್ಲಿ-ಸಹಾರ್ಸ ಸೂಪರ್ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಟಾವಾದ ಸಮೀಪ ಗುರುವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, 19 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದು ಇಟಾವಾದಲ್ಲಿ ಕಳೆದ 10 ಗಂಟೆಗಳಲ್ಲಿ ನಡೆಯುತ್ತಿರುವ ಎರಡನೇ ಘಟನೆಯಾಗಿದೆ.
ರೈಲಿನ ಎಸ್-6 ಬೋಗಿಯಲ್ಲಿ ಸುಮಾರು 2 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತು. ಇದರಿಂದ 19 ಮಂದಿ ಪ್ರಯಾಣಿಕರು ಗಾಯಗೊಂಡರು. ಇವರಲ್ಲಿ 11 ಮಂದಿಗೆ ಗಂಭೀರ ಗಾಯಗಳಾಗಿವೆ.
ರೈಲು ಹೊಸದಿಲ್ಲಿಯಿಂದ ಬಿಹಾರದ ಸಹಾರ್ಸಕ್ಕೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ರೈಲು ಮುಂಜಾನೆ ಸುಮಾರು 2.12 ಗಂಟೆಗೆ ಇಟಾವಾ ತಲುಪುತ್ತಿದ್ದಂತೆ ಎಸ್-6 ಬೋಗಿಯಲ್ಲಿ ಹೊಗೆ ಬರುತ್ತಿರುವುದನ್ನು ಪ್ರಯಾಣಿಕರು ಗಮನಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರಿಂದ ಮಣಿಪುರ ಜಂಕ್ಷನ್ ಗಿಂತ ಮೊದಲೇ ರೈಲು ನಿಂತಿತು.
ಸರಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಹಾಗೂ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್)ಯ ಪ್ರಯತ್ನದ ಹೊರತಾಗಿಯೂ ಬೆಂಕಿಯನ್ನು ನಿಯಂತ್ರಿಸಲು ಒಂದು ಗಂಟೆ ಕಾಲ ಹಿಡಿಯಿತು. ಬೆಂಕಿ ನಂದಿಸಿದ ಬಳಿಕ ಬೆಂಕಿಗಾಹುತಿಯಾದ ಕೋಚ್ ಅನ್ನು ಬೇರ್ಪಡಿಸಲಾಯಿತು. ರೈಲು ಬೆಳಗ್ಗೆ 6 ಗಂಟೆಗೆ ತನ್ನ ಪ್ರಯಾಣವನ್ನು ಮುಂದುವರಿಸಿತು.
ಗಂಭೀರ ಗಾಯಗೊಂಡ 11 ಮಂದಿಯನ್ನು ಸೈಫೈ ವೈದ್ಯಕೀಯ ವಿಶ್ವವಿದ್ಯಾನಿಲಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಇದುವರೆಗೆ ಯಾವುದೇ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಗಾಯಗೊಂಡ ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಾದೃಷ್ಟಕರ ಘಟನೆ ನಡೆಯಲು ಕಾರಣವಾದ ಸನ್ನಿವೇಶದ ಬಗ್ಗೆ ಒಳನೋಟ ನೀಡುವ ವಿಸ್ತೃತ ತನಿಖೆ ನಡೆಸಲಾಗುವುದು’’ ಎಂದು ಅಧಿಕಾರಿ ತಿಳಿಸಿದ್ದಾರೆ.