×
Ad

ಪ್ರಧಾನಿ ಭೇಟಿಗೆ ಮೊದಲು ದಿಲ್ಲಿ ಸ್ಫೋಟದ ಗಾಯಾಳುಗಳ ಧಿರಿಸು, ಪ್ಲಾಸ್ಟರ್ ಬದಲಾವಣೆ: ಆಪ್ ಶಾಸಕ ಸೌರಭ್ ಭಾರದ್ವಾಜ್ ಆರೋಪ

Update: 2025-11-13 18:04 IST

Photo : X/@Saurabh_MLAgk

ಹೊಸದಿಲ್ಲಿ: ಕೆಂಪು ಕೋಟೆ ಬಳಿಯ ಸ್ಫೋಟದಲ್ಲಿ ಗಾಯಗೊಂಡವರನ್ನು LNJP ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಪ್ರತ್ಯೇಕ ಭೇಟಿಗಳ ಬಗ್ಗೆ ಆಮ್ ಆದ್ಮಿ ಪಾರ್ಟಿ (ಆಪ್) ಆರೋಪ ಮಾಡಿದೆ. ರೋಗಿಯ ಡ್ರೆಸಿಂಗ್ ಮತ್ತು ಪ್ಲಾಸ್ಟರ್ ಪ್ರಧಾನಿಯವರ ಆಗಮನಕ್ಕೂ ಮುನ್ನ ಬದಲಾಯಿಸಲಾಗಿದೆ ಎಂದು ಆಪ್ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಭಾರದ್ವಾಜ್ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಹಂಚಿಕೊಂಡಿರುವ ಎರಡು ಚಿತ್ರಗಳಲ್ಲಿ, ನ. 11ರಂದು ಸಿಎಂ ರೇಖಾ ಗುಪ್ತಾ ಭೇಟಿ ನೀಡಿದಾಗ ಇದ್ದ ರೋಗಿಯ ಸ್ಥಿತಿಯೊಂದಿಗೆ, ನ. 12ರಂದು ಪ್ರಧಾನಿ ಭೇಟಿ ನೀಡಿದಾಗ ಕಂಡುಬಂದ ಹೊಸ 'ವೇಷಭೂಷಣ' ಮತ್ತು ಹೊಸ ಪ್ಲಾಸ್ಟರ್ ನಡುವಿನ ವ್ಯತ್ಯಾಸವನ್ನು ಅವರು ಉಲ್ಲೇಖಿಸಿದ್ದಾರೆ. “ಸ್ಪಷ್ಟವಾಗಿ ‘ಫೋಟೋ’ಗೆ ಸಿದ್ಧತೆ ನಡೆಸಿದಂತೆ ಕಂಡುಬರುತ್ತದೆ” ಎಂದು ಅವರು ಆರೋಪಿಸಿದ್ದಾರೆ.

ಭೂತಾನ್‌ನಿಂದ ವಾಪಸ್ಸಾದ ತಕ್ಷಣ LNJP ಆಸ್ಪತ್ರೆಗೆ ತೆರಳಿದ ಪ್ರಧಾನಿ ಮೋದಿ, ಗಾಯಾಳುಗಳ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದು, ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದರು. “ಪಿತೂರಿಯ ಹಿಂದಿರುವವರನ್ನು ಕಟಕಟೆಯಲ್ಲಿ ನಿಲ್ಲಿಸಲಾಗುವುದು", ಎಂದು ಅವರು ಹೇಳಿದ್ದರು.

ಕೆಂಪು ಕೋಟೆ ಬಳಿ ಈ ಸೋಮವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಗಾಯಾಳು LNJP ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿದೆ. ಸರ್ಕಾರ ಈ ಘಟನೆಯನ್ನು ʼಭಯೋತ್ಪಾದಕ ದಾಳಿʼ ಎಂದು ಹೇಳಿದೆ.

ಸ್ಫೋಟದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ದಿಲ್ಲಿ ಸರ್ಕಾರದಿಂದ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಶಾಶ್ವತ ಅಂಗವೈಕಲ್ಯ ಉಂಟಾದವರಿಗೆ 5 ಲಕ್ಷ ರೂ, ಗಂಭೀರ ಗಾಯಾಳುಗಳಿಗೆ 2 ಲಕ್ಷ ರೂ. ಮತ್ತು ಸಣ್ಣ ಗಾಯಾಳುಗಳಿಗೆ 20,000 ರೂ. ಪರಿಹಾರ ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News