ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ ಮೇಲೆ ಹಲ್ಲೆ: ಕಾಂಗ್ರೆಸ್, ಆಪ್ ಖಂಡನೆ
ರೇಖಾ ಗುಪ್ತ |PC : PTI
ಹೊಸದಿಲ್ಲಿ: ಇಂದು ಬೆಳಗ್ಗೆ ಸಿವಿಲ್ ಲೈನ್ಸ್ ನಲ್ಲಿರುವ ಮುಖ್ಯಮಂತ್ರಿ ರೇಖಾ ಗುಪ್ತರ ಅಧಿಕೃತ ನಿವಾಸದಲ್ಲಿ ಅವರು ಜನರ ಅಹವಾಲುಗಳನ್ನು ಸ್ವೀಕರಿಸುವಾಗ, ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಖಂಡಿಸಿವೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿನ ಮಹಿಳೆಯರ ಸುರಕ್ಷತೆ ಕುರಿತು ಪೊಲೀಸರನ್ನೂ ಪ್ರಶ್ನಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಹಾಗೂ ವಿರೋಧಗಳು ಸ್ವೀಕಾರಾರ್ಹವೇ ಹೊರತು, ಹಿಂಸೆಗೆ ಯಾವುದೇ ಜಾಗವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ದಿಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಬಗ್ಗೆ ನನಗೆ ವಿಶ್ವಾಗಸವಿದೆ. ಮುಖ್ಯಮಂತ್ರಿಗಳು ಸಂಪೂರ್ಣ ಸುರಕ್ಷಿತ ಹಾಗೂ ಆರೋಗ್ಯಕರವಾಗಿರಲಿ ಎಂದು ನಾನು ಹಾರೈಸುತ್ತೇನೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ಕೂಡಾ ಇದೇ ಬಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ರೇಖಾ ಗುಪ್ತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ದಿಲ್ಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್, ಇದು ತೀರಾ ದುಃಖಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಸಿವಿಲ್ ಲೈನ್ಸ್ ರಸ್ತೆಯಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ ‘ಜನ್ ಸುನ್ವಾಲ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ, ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದ. ಬಳಿಕ, ಆತನನ್ನು ತಕ್ಷಣವೇ ವಶಕ್ಕೆ ಪಡೆದ ಪೊಲೀಸರು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.