×
Ad

ಕಿರಿಯ ವಿದ್ಯಾರ್ಥಿಯನ್ನು ಅಪಹರಿಸಿ ಹಲ್ಲೆ ಮಾಡಿ ರೀಲ್ ಅಪ್‍ಲೋಡ್ ಮಾಡಿದ ಹಿರಿಯ ವಿದ್ಯಾರ್ಥಿಗಳು!

Update: 2025-04-19 13:17 IST

Photo credit: AI

ರೂರ್ಕಿ: ಹದಿನೈದು ವರ್ಷ ವಯಸ್ಸಿನ 9ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಅದೇ ಶಾಲೆಯ ಹಿರಿಯ ಸಹಪಾಠಿಗಳೇ ಅಪಹರಿಸಿ ಆತನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಕಿರಿಯ ವಿದ್ಯಾರ್ಥಿ ಟ್ಯೂಷನ್‍ಗೆ ಹೋಗುತ್ತಿದ್ದ ವೇಳೆ 10ನೇ ತರಗತಿಯ ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳಲ್ಲಿ ಅಡ್ಡಗಟ್ಟಿ ಈ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿಯ ತಂದೆ ಆಪಾದಿಸಿದ್ದಾರೆ. ಹಳೆ ಕೈಗಾರಿಕಾ ಪ್ರದೇಶದ ನಿರ್ಜನ ಜಾಗಕ್ಕೆ ಕರೆದೊಯ್ದು, ತುಳಿದು, ಗುದ್ದಿ, ಬೆಲ್ಟ್ ನಿಂದ ಹೊಡೆದಿದ್ದಾರೆ ಎಂದು ದೂರಲಾಗಿದೆ.

ಅಪ್ರಾಪ್ತ ವಯಸ್ಸಿನ ಆರೋಪಿಗಳು ಈ ಘಟನೆಯ ವಿಡಿಯೊ ಚಿತ್ರೀಕರಿಸಿ ಈ 'ಸಾಹಸ ಕಾರ್ಯʼಕ್ಕೆ ಅಭಿಪ್ರಾಯಗಳನ್ನು ಪಡೆಯುವ ಉದ್ದೇಶದಿಂದ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದಾರೆ. ದಾರಿಹೋಕರು ಮಧ್ಯಪ್ರವೇಶಿಸಿದ ಸಂದರ್ಭದಲ್ಲಿ ಹಲ್ಲೆಕೋರರು ಓಡಿಹೋದರು ಎಂದು ತಿಳಿದುಬಂದಿದೆ.

ಪ್ರತಿಷ್ಠಿತ ಶಾಲೆಯ ಎರಡು ವಿದ್ಯಾರ್ಥಿ ಗುಂಪುಗಳ ನಡುವಿನ ದ್ವೇಷ ಈ ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಹಿಂದಿನ ದಿನ ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ನಡೆದ ಇಂಥದ್ದೇ ಹಲ್ಲೆಯನ್ನು ಈ ವಿದ್ಯಾರ್ಥಿ ಖಂಡಿಸಿದ್ದಕ್ಕಾಗಿ ಆತನ ಮೇಲೂ ಹಲ್ಲೆ ನಡೆದಿದೆ. ಈ ಹಿಂದಿನ ಘಟನೆ ಬಗ್ಗೆ ಶಾಲಾ ಆಡಳಿತ ಮಂಡಳಿಗೂ ಮಾಹಿತಿ ಇತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ಬಾಲಕನ ತಂದೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಬಿಎನ್‍ಎಸ್ ಸೆಕ್ಷನ್ 191-2, 191-3, 190, 137-2, 115-2 ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಎಫ್‍ಐಆರ್ ನಲ್ಲಿ ಮೂವರು ವಿದ್ಯಾರ್ಥಿಗಳ ಹೆಸರು ಉಲ್ಲೇಖಿಸಿದ್ದು, ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News