×
Ad

AI ಮೊರೆ ಹೋದ ಆಕ್ಸೆಂಚರ್: 11,000 ಉದ್ಯೋಗಿಗಳ ವಜಾ, ಇನ್ನಷ್ಟು ಉದ್ಯೋಗ ಕಡಿತದ ಎಚ್ಚರಿಕೆ

Update: 2025-09-28 16:19 IST

ಆಕ್ಸೆಂಚರ್ ನ 11,000 ಉದ್ಯೋಗಿಗಳು ಎಐಗೆ ಬಲಿ, ಇನ್ನಷ್ಟು ಉದ್ಯೋಗ ಕಡಿತದ ಎಚ್ಚರಿಕೆ

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆಯ(ಎಐ) ಬಳಕೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಕನ್ಸಲ್ಟನ್ಸಿ ಸಂಸ್ಥೆ ಆಕ್ಸೆಂಚರ್ ಕೇವಲ ಮೂರು ತಿಂಗಳುಗಳಲ್ಲಿ ಸದ್ದಿಲ್ಲದೆ ತನ್ನ 11,000ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಿದೆ, ಭವಿಷ್ಯದಲ್ಲಿ ಇನ್ನಷ್ಟು ಉದ್ಯೋಗಗಳನ್ನು ಕಡಿತಗೊಳಿಸುವದಾಗಿ ಅದು ಹೇಳಿದೆ. ಮಾನವ ಸಲಹೆಗಾರರ ಬದಲು ಎಐ ಮುನ್ನಡೆಸುತ್ತಿರುವ ತಂತ್ರಜ್ಞಾನ ಯುಗಕ್ಕೆ ತನ್ನ ಕಾರ್ಯಪಡೆಯನ್ನು ಸಜ್ಜುಗೊಳಿಸಲು ವ್ಯಾಪಕ ಪರಿಷ್ಕರಣೆಯನ್ನು ಆಕ್ಸೆಂಚರ್ ನಡೆಸುತ್ತಿದೆ ಎಂದು indiatoday.in ವರದಿ ಮಾಡಿದೆ.

ಕೆಲವೇ ದಿನಗಳ ಹಿಂದೆ ಡಬ್ಲಿನ್ ಮೂಲದ ಈ ಕಂಪನಿಯು 865 ಮಿಲಿಯನ್ ಡಾಲರ್ (ಸುಮಾರು 7,669 ಕೋಟಿ ರೂ.) ವೆಚ್ಚದಲ್ಲಿ ಪುನರ್ ರಚನೆ ಕಾರ್ಯಕ್ರಮದ ವಿವರಗಳನ್ನು ಬಹಿರಂಗಗೊಳಿಸಿತ್ತು. ಸಿಬ್ಬಂದಿಗಳಿಗೆ ತ್ವರಿತವಾಗಿ ಮರು ತರಬೇತಿ ನೀಡಲು ಸಾಧ್ಯವಾಗದಿದ್ದರೆ ಇನ್ನಷ್ಟು ಉದ್ಯೋಗ ಕಡಿತ ಅನಿವಾರ್ಯವಾಗುತ್ತದೆ ಎಂದು ಅದು ಅನಾಲಿಸ್ಟ್ಗಳಿಗೆ ಎಚ್ಚರಿಕೆಯನ್ನು ನೀಡಿತ್ತು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೂಲಿ ಸ್ವೀಟ್ ನೇತೃತ್ವದ ಕಂಪನಿಯ ನಾಯಕತ್ವವು ಮರು ಕೌಶಲ್ಯ ಗಳಿಕೆಯು ಆದ್ಯತೆಯ ಆಯ್ಕೆಯಾಗಿದೆ ಎಂದು ಸ್ಪಷ್ಟಪಡಿಸಿದೆ,ಆದರೆ ಎಲ್ಲ ಉದ್ಯೋಗಿಗಳಿಗೆ ಇದು ಸಾಧ್ಯವಿಲ್ಲ.

‘ನಾವು ಸಂಕುಚಿತ ಕಾಲಮಿತಿಯಲ್ಲಿ ಸಾಗುತ್ತಿದ್ದೇವೆ. ಮರುಕೌಶಲ್ಯವು ಕಾರ್ಯಸಾಧ್ಯವಾಗದಿದ್ದರೆ ಉದ್ಯೋಗಿಗಳನ್ನು ವಜಾಗೊಳಿಸುವ ಕಠಿಣ ಆಯ್ಕೆಯನ್ನು ಮಾಡಿಕೊಳ್ಳುತ್ತೇವೆ ’ಎಂದು ಸ್ವೀಟ್ ಹೂಡಿಕೆದಾರರಿಗೆ ತಿಳಿಸಿದ್ದಾರೆ.

ಕೇವಲ ಮೂರು ತಿಂಗಳುಗಳ ಹಿಂದೆ 7,91,000 ದಷ್ಟಿದ್ದ ಆಕ್ಸೆಂಚರ್ ನ ಜಾಗತಿಕ ಸಿಬ್ಬಂದಿ ಸಂಖ್ಯೆ ಆಗಸ್ಟ್ ಅಂತ್ಯದ ವೇಳೆಗೆ 7,79,000ಕ್ಕೆ ಕುಸಿದಿದೆ.

ಆಕ್ಸೆಂಚರ್ ಈಗಲೂ ವಿಶ್ವದ ಅತಿ ದೊಡ್ಡ ವೃತ್ತಿಪರ ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದರೂ ಉದ್ಯೋಗ ಕಡಿತಗಳು ನವಂಬರ್ 2025ರ ವರೆಗೆ ನಿರಂತರವಾಗಿ ಮುಂದುವರಿಯುವ ನಿರೀಕ್ಷೆಯಿದೆ.

ಆಕ್ಸೆಂಚರ್ ತನ್ನ ಮಾನವ ಕಾರ್ಯಪಡೆಯನ್ನು ಕಡಿತಗೊಳಿಸುವುದರ ಜೊತೆಗೆ ಎಐ ಬಳಕೆಯನ್ನು ದ್ವಿಗುಣಗೊಳಿಸುತ್ತಿದೆ. ಎರಡು ವರ್ಷಗಳ ಹಿಂದೆ ಕಂಪನಿಯು 40,000 ಎಐ ಮತ್ತು ಡೇಟಾ ವೃತ್ತಿಪರರನ್ನು ಹೊಂದಿದ್ದರೆ ಈಗ ಅವರ ಸಂಖ್ಯೆ 77,000ಕ್ಕೆ ಏರಿಕೆಯಾಗಿದೆ. ಈ ‘ಮರು ಸಂಶೋಧಕರನ್ನು’ ತನ್ನ ಭವಿಷ್ಯದ ಬುನಾದಿ ಎಂದು ಆಕ್ಸೆಂಚರ್ ಪರಿಗಣಿಸಿದೆ.

ಕೌಶಲ್ಯವನ್ನು ಹೆಚ್ಚಿಸುವುದು ಮೊದಲ ಕಾರ್ಯತಂತ್ರವಾಗಿದೆ,ಆದರೆ ಅದು ವಿಫಲಗೊಂಡಾಗ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಸ್ವೀಟ್ ಒತ್ತಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News