×
Ad

ಕರೂರು ಕಾಲ್ತುಳಿತ ಪ್ರಕರಣ | ಮೃತರ ಕುಟುಂಬಗಳ ಸದಸ್ಯರನ್ನು ಭೇಟಿಯಾದ ನಟ ವಿಜಯ್

Update: 2025-10-27 20:51 IST

ನಟ ವಿಜಯ್ | Photo Credit : PTI 

ಚೆನ್ನೈ, ಅ. 27: ನಲ್ವತ್ತೊಂದು ಜನರ ಸಾವಿಗೆ ಕಾರಣವಾದ ಕರೂರು ಕಾಲ್ತುಳಿತದ ಘಟನೆ ಸಂಭವಿಸಿದ ಸುಮಾರು ಒಂದು ತಿಂಗಳ ಬಳಿಕ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸ್ಥಾಪಕಾಧ್ಯಕ್ಷ ಹಾಗೂ ನಟ ವಿಜಯ್ ಕೊನೆಗೂ ಚೆನ್ನೈಯ ಮಾಮಲ್ಲಪುರಂನಲ್ಲಿನಲ್ಲಿರುವ ಖಾಸಗಿ ರೆಸಾರ್ಟ್‌ ನಲ್ಲಿ ಮೃತರ ಕುಟುಂಬಗಳನ್ನು ಸೋಮವಾರ ಭೇಟಿಯಾಗಿದ್ದಾರೆ.

ದುಃಖತಪ್ತ ಕುಟುಂಬವನ್ನು ಭೇಟಿ ಮಾಡಲು ವಿಜಯ್ ಕರೂರಿಗೆ ಭೇಟಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ವಿಜಯ್ ಅವರ ಭದ್ರತೆಯನ್ನು ಉಲ್ಲೇಖಿಸಿ ಅದರ ಬದಲು ಅವರನ್ನು ಬಸ್‌ ಗಳಲ್ಲಿ ರೆಸಾರ್ಟ್‌ಗೆ ಕರೆದುಕೊಂಡು ಬರಲಾಯಿತು.

230ಕ್ಕೂ ಅಧಿಕ ಸದಸ್ಯರನ್ನು ಒಳಗೊಂಡ ಸುಮಾರು 37 ಕುಟುಂಬಗಳು ಈ ಸಭೆಯಲ್ಲಿ ಭಾಗವಹಿಸಿದವು. ಮಾಧ್ಯಮ ಹಾಗೂ ಸಾರ್ವಜನಿಕರಿಗೆ ಈ ಸಭೆಗೆ ಪ್ರವೇಶ ನಿರಾಕರಿಸಲಾಗಿತ್ತು.

ವಿಜಯ್ ಅವರು ಪ್ರತಿಯೊಂದು ಕುಟುಂಬವನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ. ಸಂತಾಪ ವ್ಯಕ್ತಪಡಿಸಿದ್ದಾರೆ. ನೆರವು ಮುಂದುವರಿಸುವ ಭರವಸೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಹೆಚ್ಚುವರಿ ಹಣಕಾಸು ನೆರವು ಒದಗಿಸಲು ವಿಜಯ್, ಅವರ ಜೀವನೋಪಾಯ, ಸಾಲ ಹಾಗೂ ಮಕ್ಕಳ ವಿದ್ಯಾಭ್ಯಾಸದ ಕುರಿತು ಲಿಖಿತ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

‘‘ನೀವು ನನ್ನನ್ನು ನಿಮ್ಮ ಕುಟುಂಬದ ಸದಸ್ಯರಲ್ಲಿ ಓರ್ವನೆಂದು ಪರಿಗಣಿಸಬಹುದು. ನಾನು ನಿಮ್ಮ ನೋವನ್ನು ಹಂಚಿಕೊಳ್ಳುತ್ತೇನೆ. ಎಲ್ಲಾ ರೀತಿಯಲ್ಲೂ ನಿಮ್ಮೊಂದಿಗೆ ನಿಲ್ಲುತ್ತೇನೆ’’ ಎಂದು ವಿಜಯ್ ಕುಟುಂಬಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ.

ಸಭೆಯ ಸಂದರ್ಭ ವಿಜಯ್ ಅವರು ತಾವೇ ಕುಟುಂಬಗಳಿಗೆ ಚಹಾ ನೀಡಿದರು ಹಾಗೂ ಪ್ರತಿ ಕೊಠಡಿಯಲ್ಲಿ ಇರಿಸಲಾಗಿದ್ದ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಎಂದು ವರದಿ ಹೇಳಿದೆ.

ಕರೂರಿನಲ್ಲಿ ಸೆಪ್ಟಂಬರ್ 27ರಂದು ನಡೆದ ವಿಜಯ್ ಅವರ ರ‍್ಯಾಲಿಯ ಸಂದರ್ಭ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಸಾವನ್ನಪ್ಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News