×
Ad

ಉತ್ತರ ಪ್ರದೇಶ: ಒಂದೇ ಮನೆಯಲ್ಲಿ 4,271 ಮತದಾರರ ನೋಂದಣಿ: ಸಂಜಯ್ ಸಿಂಗ್ ಆರೋಪ

ಮತಪಟ್ಟಿ ಅಕ್ರಮ | ಮಹಾದೇವಪುರದ ನಂತರ ಮಹೋಬಾ?

Update: 2025-09-16 21:54 IST

Credit: X/@AamAadmiParty 

ಲಕ್ನೊ: ಕರ್ನಾಟಕದ ಮಹಾದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಿಗೇ, ಇಂತಹುದೇ ಆರೋಪಗಳು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮತಪಟ್ಟಿಯ ಕುರಿತೂ ಕೇಳಿ ಬಂದಿದೆ.

ಮಂಗಳವಾರ ಸುದ್ದಿ ಗೋಷ್ಠಿ ನಡೆಸಿದ ಆಪ್ ನಾಯಕ ಸಂಜಯ್ ಕುಮಾರ್, ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮತಪಟ್ಟಿಯಲ್ಲಿ ಅಕ್ರಮ ನಡೆದಿದ್ದು, ಒಂದೇ ಮನೆಯಲ್ಲಿ 4,271 ಮತದಾರರು ನೋಂದಣಿಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

“ಮಹೋಬಾ ಜಿಲ್ಲೆಯ ಒಂದು ಮನೆಯಲ್ಲಿ 243 ಹಾಗೂ ಮತ್ತೊಂದು ಮನೆಯಲ್ಲಿ 185 ಮತದಾರರಿದ್ದಾರೆ ಎಂದು ನಾನು ನಿನ್ನೆ ಹೇಳಿದ್ದ ವಿಷಯ ಆಘಾತಕಾರಿಯಾಗಿತ್ತು. ಇಂದು ನಾನು ಮತ್ತೊಂದು ಪ್ರಕರಣವನ್ನು ಪತ್ತೆ ಹಚ್ಚಿದ್ದು, ಒಂದೇ ಮನೆಯಲ್ಲಿ 4,271 ಮತದಾರರು ನೋಂದಣಿಗೊಂಡಿದ್ದಾರೆ. ಒಂದು ವೇಳೆ ಒಂದೇ ಮನೆಯಲ್ಲಿ 4,271 ಮತದಾರರಿರುವುದಾದರೆ, ಅಂತಹ ಕುಟುಂಬವು 12,000 ಸದಸ್ಯರನ್ನು ಒಳಗೊಂಡಿರಬೇಕು. ಇಂತಹ ದೊಡ್ಡ ಕುಟುಂಬವನ್ನು ಯಾರಾದರೂ ಪತ್ತೆ ಹಚ್ಚಬೇಕಿದೆ” ಎಂದು ವ್ಯಂಗ್ಯವಾಡಿದರು.

ಬಿಜೆಪಿ ಹಾಗೂ ಚುನಾವಣಾ ಆಯೋಗ ಕೈಜೋಡಿಸಿದ್ದರಿಂದ ಉತ್ತರ ಪ್ರದೇಶದಲ್ಲಿ ಮತಗಳ್ಳತನ ಪ್ರಾರಂಭಗೊಂಡಿದೆ ಎಂದೂ ಅವರು ಆರೋಪಿಸಿದರು.

“ನಾನು ಆ ಮನೆಯ ಮಾಲಕನಿಗೆ ಹೇಳಬಯಸುವುದೆಂದರೆ, ಒಂದು ವೇಳೆ ಅವರೇನಾದರೂ ಗ್ರಾಮ ಮುಖ್ಯಸ್ಥನ ಹುದ್ದೆಗೆ ಸ್ಪರ್ಧಿಸಿದರೆ, ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಅವರ ಕುಟುಂಬವನ್ನು ಹೊರತುಪಡಿಸಿ, ಬೇರೆ ಯಾರೂ ಅವರಿಗೆ ಮತ ಚಲಾಯಿಸುವುದೇ ಬೇಕಿಲ್ಲ” ಎಂದೂ ಅವರು ಲಘು ಧಾಟಿಯಲ್ಲಿ ಛೇಡಿಸಿದರು.

ಇಷ್ಟು ಮತದಾರರಿರುವ ಮನೆಯಿರುವ ಗ್ರಾಮದಲ್ಲಿ ಒಟ್ಟು 16,000 ಮತದಾರರಿದ್ದಾರೆ. ಹೀಗಾಗಿ ಈ ಅಕ್ರಮ ತುಂಬಾ ಗಂಭೀರವಾಗಿದೆ ಎಂದು ಅವರು ಆಪಾದಿಸಿದರು.

ಸೆಪ್ಟೆಂಬರ್ 20ರಂದು ಲಕ್ನೊದಲ್ಲಿ ಪಕ್ಷದ ಹಿರಿಯ ಪದಾಧಿಕಾರಿಗಳೊಂದಿಗೆ ಮತಪಟ್ಟಿ ಸಮಸ್ಯೆಗಳ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಉತ್ತರ ಪ್ರದೇಶ ಆಪ್ ಅಧ್ಯಕ್ಷ ಸಭಾಜಿತ್ ಸಿಂಗ್ ತಿಳಿಸಿದರು.

“ಮಹೋಬಾದಂತೆಯೇ ಬೇರೆ ಜಿಲ್ಲೆಗಳಲ್ಲಿನ ಅಕ್ರಮಗಳ ಕುರಿತು ಪಕ್ಷ ಗಮನ ಹರಿಸಲಿದೆ. ಮತಪಟ್ಟಿಯಿಂದ ಮಾವೊಬ್ಬ ಅರ್ಹ ಮತದಾರನೂ ಕೈಬಿಟ್ಟು ಹೋಗಬಾರದು ಅಥವಾ ಯಾವೊಬ್ಬ ಅನರ್ಹ ಮತದಾರನೂ ಸೇರ್ಪಡೆಯಾಗಬಾರದು ಎಂಬುದನ್ನು ಖಾತರಿಗೊಳಿಸುವುದರತ್ತ ನಾವು ಗಮನ ಹರಿಸಲಿದ್ದೇವೆ. ಈ ವಿಷಯವನ್ನು ಸಭೆಯಲ್ಲಿ ಚರ್ಚಿಸಲಾಗುವುದು” ಎಂದೂ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News