×
Ad

‘ಅಂತ್ಯಸಂಸ್ಕಾರ’ ಮುಗಿಸಿದ ಬಳಿಕ ‘ನಾನಿನ್ನೂ ಬದುಕಿದ್ದೇನೆ’ ಎಂದು ತಂದೆಗೆ ವಿಡಿಯೋ ಕರೆ ಮಾಡಿದ ಮಗಳು!

Update: 2023-08-21 23:44 IST

ಸಾಂದರ್ಭಿಕ ಚಿತ್ರ.

ಪಾಟ್ನಾ: ಮೃತಪಟ್ಟ ಮಗಳ ಅಂತ್ಯಸಂಸ್ಕಾರ ಮುಗಿಸಿ ಬಂದ ತಂದೆಗೆ ಸ್ವತಃ ಮಗಳೇ ಕರೆ ಮಾಡಿ ‘ಪಪ್ಪಾ ನಾನು ಬದುಕಿದ್ದೇನೆʼ ಎಂದು ಹೇಳಿದರೆ ಹೇಗೆ ಇರಬಹುದು ಊಹಿಸಿ.

ಈ ಘಟನೆ ನಡೆದಿದ್ದು ಬಿಹಾರದ ಪುರ್ನಿಯಾದಲ್ಲಿ. ಅಕ್ಬರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಶು ಕುಮಾರಿ ಎಂಬ ಹುಡುಗಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಕುಟುಂಬಸ್ಥರು, ಪೊಲೀಸರು ಎಲ್ಲೆಡೆ ಹುಡುಕಾಡಿದ್ದರೂ ಅಂಶು ಕುಮಾರಿಯ ಪತ್ತೆಯೇ ಇರಲಿಲ್ಲ. ಕೆಲವು ದಿನಗಳ ಹಿಂದೆ ಕಾಲುವೆ ಒಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಮುಖವು ಗುರುತಿಸಲಾಗದಷ್ಟು ಉಬ್ಬಿಕೊಂಡಿತ್ತು. ಅದು ಕಾಣೆಯಾದ ಅಂಶು ಕುಮಾರಿಯದ್ದೇ ದೇಹ ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದರು.

ಮಗಳ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದ ತಂದೆ, ಕೈಚೆಲ್ಲಿ ಕೂತಿದ್ದರು. ಕೊನೆಗೆ ಅಂತ್ಯಕ್ರಿಯೆಯನ್ನು ಬಾಲಕಿಯ ಅಜ್ಜ ನಡೆಸಲು ಮುಂದೆ ಬಂದಿದ್ದು, ಈ ಸುದ್ದಿ ವ್ಯಾಪಕವಾಗಿ ಹರಡಿತ್ತು. ಇದು ನಾಪತ್ತೆಯಾಗಿದ್ದ ಬಾಲಕಿಯ ಗಮನಕ್ಕೂ ಬಂದಿದ್ದು, ತಕ್ಷಣವೇ ಆಕೆ ತಂದೆಗೆ ವಿಡಿಯೋ ಕರೆ ಮಾಡಿ, ʼಪಪ್ಪಾ ನಾನಿನ್ನೂ ಬದುಕಿದ್ದೇನೆʼ ಎಂದು ಅಳುತ್ತಾ ತಿಳಿಸಿದ್ದಾಳೆ ಎಂದು timesofindia ವರದಿ ಮಾಡಿದೆ.

ಅಂಶು ತನ್ನ ಪ್ರಿಯಕರನೊಂದಿಗೆ ಊರು ಬಿಟ್ಟಿದ್ದು, ಆತನನ್ನೇ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಅತ್ತೆ ಮನೆಯಲ್ಲಿದ್ದಳು. ಈ ವೃತ್ತಾಂತವನ್ನೆಲ್ಲಾ ತಂದೆಗೆ ತಿಳಿಸಿದ ಅಂಶು, ಬದುಕಿರುವ ಮಾಹಿತಿಯನ್ನು ನೀಡಿ, ಕುಟುಂಬ ದುಃಖಪಡದಂತೆ ತಿಳಿಸಿದ್ದಾಳೆ ಎಂದು ವರದಿಯಾಗಿದೆ.

"ಘಟನೆಯ ಬಗ್ಗೆ ನನಗೆ ತಿಳಿದ ನಂತರ, ವಾಸ್ತವವನ್ನು ತಿಳಿಯಲು ನಾನು ಹುಡುಗಿಯ ಮೊಬೈಲ್ ಫೋನ್‌ಗೆ ವೀಡಿಯೊ ಕರೆ ಮಾಡಿದ್ದೇನೆ. ಅವಳು ತನ್ನ ಅತ್ತೆಯ ಜೊತೆ ಚೆನ್ನಾಗಿಯೇ ಇದ್ದಾಳೆ ಎಂದು ಹೇಳಿದ್ದಾಳೆ" ಎಂದು ಅಕ್ಬರ್‌ಪುರ ಠಾಣಾಧಿಕಾರಿ ಸೂರಜ್ ಪ್ರಸಾದ್ timesofindia.com ಗೆ ತಿಳಿಸಿದ್ದಾರೆ.

ಇನ್ನು, ಅಂತ್ಯಸಂಸ್ಕಾರಕ್ಕೊಳಗಾದ ಯುವತಿಯ ಗುರುತನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು, ಇದೊಂದು ಮರ್ಯಾದಾ ಹತ್ಯೆ ಘಟನೆ ಆಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮೃತ ಯುವತಿಯ ಪೋಷಕರು ತಲೆ ಮರೆಸಿಕೊಂಡಿದ್ದಾರೆ ಎಂದು ಠಾಣಾಧಿಕಾರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News