ಅಮಿತಾಬ್ ಬಚ್ಚನ್ ಧ್ವನಿಯಲ್ಲಿದ್ದ ಸೈಬರ್ ಅಪರಾಧ ಜಾಗೃತಿ ಕಾಲರ್ ಟ್ಯೂನ್ ಇಂದಿನಿಂದ ಸ್ಥಗಿತ
ಅಮಿತಾಬ್ ಬಚ್ಚನ್ (PTI)
ಹೊಸದಿಲ್ಲಿ: ಫೋನ್ ಕರೆ ಮಾಡಿದಾಗಲೆಲ್ಲಾ ಕೇಳಿಬರುತ್ತಿದ್ದ ʼಸೈಬರ್ ವಂಚನೆಗಳ ವಿರುದ್ಧ ಜಾಗರೂಕರಾಗಿರಿʼ ಎನ್ನುವ ರೆಕಾರ್ಡ್ ಮಾಡಲಾದ ಧ್ವನಿ ಇಂದಿನಿಂದ ಸ್ಥಗಿತಗೊಳ್ಳಲಿದೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಧ್ವನಿಯನ್ನು ಒಳಗೊಂಡ, ಸೈಬರ್ ಅಪರಾಧದ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡುವ ಪರಿಚಿತ ಕಾಲರ್ ಟ್ಯೂನ್ ಇನ್ನು ಮುಂದೆ ಕೇಳಿಬರುವುದಿಲ್ಲ.
ಸರ್ಕಾರದ ಭಾಗವಾಗಿದ್ದ ಈ ಜಾಗೃತ ಅಭಿಯಾನವು ಗುರುವಾರ (ಜೂನ್ 26) ಅಧಿಕೃತವಾಗಿ ಕೊನೆಗೊಂಡ ಕಾರಣ ಕಾಲರ್ ಟ್ಯೂನ್ ಅನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಆನ್‌ಲೈನ್ ವಂಚನೆಗಳ ಹೆಚ್ಚುತ್ತಿರುವ ಬೆದರಿಕೆಯ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಇದನ್ನು ಸರ್ಕಾರ ಅಳವಡಿಸಿತ್ತು. ಕೆಲವರು ತುರ್ತು ಸಂದರ್ಭಗಳಲ್ಲಿ, ಕಾಲರ್ ಟ್ಯೂನ್ ಕರೆಗಳನ್ನು ಸಂಪರ್ಕಿಸುವಲ್ಲಿ ಅನಗತ್ಯ ವಿಳಂಬವನ್ನು ಉಂಟುಮಾಡುತ್ತದೆ ಎಂದು ದೂರಿದ್ದರು. ಕೆಲವರು ಅಮಿತಾಬ್ ಬಚ್ಚನ್ ಅವರನ್ನು ಟೀಕಿಸಿ, ದೀರ್ಘ ಸಂದೇಶಕ್ಕಾಗಿ ಅವರನ್ನು ಟ್ರೋಲ್ ಮಾಡಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಹಲವರು ಈ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದರು. ವರದಿಗಳ ಪ್ರಕಾರ, ಈಗ ಅಭಿಯಾನ ಮುಗಿದಿರುವುದರಿಂದ, ಭಾರತ ಸರ್ಕಾರವು ಕಾಲರ್ ಟ್ಯೂನ್ ಅನ್ನು ಸಹ ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.