ಅಂಡಮಾನ್ ಸಹಕಾರಿ ಬ್ಯಾಂಕ್ ಹಗರಣ: ಕಾಂಗ್ರೆಸ್ ನ ಮಾಜಿ ಸಂಸದ ಬಂಧನ
ಅಂಡಮಾನ್ ಸಹಕಾರಿ ಬ್ಯಾಂಕ್ |PC: ANSCBL
ಪೋರ್ಟ್ಬ್ಲೇರ್, ಜು. 18: ಅಂಡಮಾನ್ ಮತ್ತು ನಿಕೋಬಾರ್ ರಾಜ್ಯ ಸಹಕಾರಿ ಬ್ಯಾಂಕ್ ನಿಯಮಿತ (ಎಎನ್ಎಸ್ಸಿಬಿಎಲ್)ದ ಸಾಲ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಶುಕ್ರವಾರ ಕಾಂಗ್ರೆಸ್ ನ ಮಾಜಿ ಸಂಸದ ಕುಲದೀಪ್ ರೈ ಶರ್ಮಾರನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದರು.
ಹಿಂದೆ ಎಎನ್ಎಸ್ಸಿಬಿಎಲ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶರ್ಮಾರನ್ನು ಪೋರ್ಟ್ ಬ್ಲೇರ್ ನ ಖಾಸಗಿ ಆಸ್ಪತ್ರೆಯೊಂದರಿಂದ ಬಂಧಿಸಲಾಯಿತು. ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.
ಎಎನ್ಎಸ್ಸಿಬಿಎಲ್ ಹಗರಣದಲ್ಲಿ ಶರ್ಮಾರನ್ನು ಬಂಧಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ಮತ್ತು ಆರ್ಎಸ್ಎಸ್ ಮಾಡಿರುವ ಪಿತೂರಿಯ ಭಾಗವಾಗಿದೆ ಎಂದು ಕಾಂಗ್ರೆಸ್ ನ ಅಂಡಮಾನ್ ಮತ್ತು ನಿಕೋಬಾರ್ ಘಟಕದ ಉಸ್ತುವಾರಿ ಮಾಣಿಕಮ್ ಟಾಗೋರ್ ಆರೋಪಿಸಿದ್ದಾರೆ.
‘‘ಇಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೊಲೀಸರು ಎಎನ್ಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಕುಲದೀಪ್ ರೈ ಶರ್ಮಾರನ್ನು ಬಂಧಿಸಿದ್ದಾರೆ. ಬಿಜೆಪಿ ನಾಯಕತ್ವ ಮತ್ತು ಆರ್ಎಸ್ಎಸ್ ನಿರಂತರವಾಗಿ ಕಾಂಗ್ರೆಸ್ ನಾಯಕತ್ವಕ್ಕೆ ಕಿರುಕುಳ ನೀಡುತ್ತಿರುವುದು ದುರದೃಷ್ಟಕರವಾಗಿದೆ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದರೂ ಆಗಿರುವ ಟಾಗೋರ್ ಹೇಳಿದರು.