×
Ad

ದಟ್ಟ ಮಂಜು: ವಿಮಾನ ವಿಳಂಬ ಸಾಧ್ಯತೆ ಘೋಷಿಸಿದ ಇಂಡಿಗೋ

Update: 2025-12-17 07:23 IST

 ಇಂಡಿಗೋ ವಿಮಾನ | Photo Credit : PTI

ಹೊಸದಿಲ್ಲಿ: ಉತ್ತರ ಭಾರತ ಮತ್ತು ಪೂರ್ವಭಾರತದಲ್ಲಿ ದಟ್ಟ ಮಂಜು ಮುಸುಕಿರುವ ಹಿನ್ನೆಲೆಯಲ್ಲಿ ಸಂಭಾವ್ಯ ವಿಮಾನ ವಿಳಂಬ ಮತ್ತು ಸಂಚಾರ ವ್ಯತ್ಯಯ ಸಾಧ್ಯತೆ ಸೇರಿದಂತೆ ವಿಮಾನ ಪ್ರಯಾಣಿಕರಿಗೆ ಸಲಹೆಗಳನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಪ್ರಕಟಿಸಿದೆ. ವಿಮಾನದ ವೇಳಾಪಟ್ಟಿ ನಿರ್ವಹಿಸುವುದನ್ನು ಅನುಷ್ಠಾನಕ್ಕೆ ತರುವ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಡಿಮೆ ಗೋಚರತೆಯ ಪರಿಸ್ಥಿತಿಯಲ್ಲಿ ಗ್ರಾಹಕರ ಪ್ರಯಾಣ ಸುರಕ್ಷತೆಗೆ ನೆರವಾಗುವ ಕ್ರಮಗಳನ್ನು ಪ್ರಕಟಿಸಿದೆ.

"ಉತ್ತರ ಹಾಗೂ ಪೂರ್ವ ಭಾಗದಲ್ಲಿ ಮುಂಜಾನೆಯ ವೇಳೆ ಚಳಿಗಾಲದಲ್ಲಿ ಆಗಸ ದಟ್ಟ ಮಂಜಿನಿಂದ ಮುಸುಕುವ ಸಾಧ್ಯತೆ ಅಂದಾಜಿಸಿರುವ ಹಿನ್ನೆಲೆಯಲ್ಲಿ, ಗೋಚರತೆ ಕುಸಿಯುವ ಸಾಧ್ಯತೆ ಇದೆ ಹಾಗೂ ವಿಮಾನದ ಚಲನೆಯ ವೇಗ ಕುಸಿಯಲಿದೆ. ಸುರಕ್ಷತೆಯ ದೃಷ್ಟಿಯಿಂದ ಕೆಲ ವಿಮಾನಗಳು ವಿಳಂಬವಾಗಬಹುದು ಅಥವಾ ಕೆಲ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಬಹುದು" ಎಂದು ಎಕ್ಸ್ ಪೋಸ್ಟ್ ನಲ್ಲಿ ಇಂಡಿಗೋ ಸ್ಪಷ್ಟಪಡಿಸಿದೆ.

ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಸುಲಲಿತ ಕಾರ್ಯಾಚರಣೆಯನ್ನು ನಿರ್ವಹಿಸಲು ಸಿಬ್ಬಂದಿ ತಂಡ ಸಜ್ಜಾಗಿದೆ ಎಂದು ಪ್ರಕಟಣೆ ಹೇಳಿದೆ. "ಎಲ್ಲ ವಿಮಾನ ನಿಲ್ದಾಣಗಳಲ್ಲಿರುವ ನಮ್ಮ ತಂಡ ಎಲ್ಲ ವಿಮಾನ ಸಂಚಾರವನ್ನು ಸುಲಲಿತವಾಗಿ ನಿರ್ವಹಿಸುವ ಉದ್ದೇಶದಿಂದ ಸಮನ್ವಯದ ಕಾರ್ಯ ನಿರ್ವಹಿಸಲು ಸರ್ವಸನ್ನದ್ಧವಾಗಿದೆ. ಗ್ರಾಹಕರಿಗೆ ಅಗತ್ಯ ನೆರವು ನೀಡುವಲ್ಲಿ ಮತ್ತು ಕಾರ್ಯಾಚರಣೆಯ ಹರಿವನ್ನು ನಿರ್ವಹಿಸಲು ಆದ್ಯತೆ ನೀಡಲಿದೆ ಎಂದು ಹೇಳಿದೆ.

ಪ್ರಯಾಣಿಕರು ಹೆಚ್ಚುವರಿ ಅವಧಿಯನ್ನು ತಮ್ಮ ಪ್ರಯಾಣ ವೇಳಾಪಟ್ಟಿ ಸಿದ್ಧಪಡಿಸುವ ವೇಳೆ ಇರಿಸಿಕೊಳ್ಳುವಂತೆ ಮತ್ತು ಇಂಡಿಗೋ ವೆಬ್‍ಸೈಟ್ ಅಥವಾ ಆ್ಯಪ್ ಮೂಲಕ ವಿಮಾನದ ಸ್ಥಿತಿಗತಿಯ ಮೇಲೆ ನಿಗಾ ಇರಿಸುವಂತೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News