ಇಂಡಿಗೋ ವಿಮಾನಯಾನ ಬಿಕ್ಕಟ್ಟು: ಪರಿಹಾರ ಕೋರಿ ಪಿಐಎಲ್
ಇಂಡಿಗೊ ವಿಮಾನ | Photo Credit : PTI
ಹೊಸದಿಲ್ಲಿ, ಡಿ. 16: ಟಿಕೆಟ್ಗಳು ರದ್ದುಗೊಂಡ ಪ್ರಯಾಣಿಕರಿಗೆ ಅವರ ಪೂರ್ಣ ಟಿಕೆಟ್ ಬೆಲೆಯ ನಾಲ್ಕು ಪಟ್ಟು ಪರಿಹಾರ ನೀಡುವಂತೆ ಕೇಂದ್ರ ಸರಕಾರ ಮತ್ತು ಇಂಡಿಗೋ ವಿಮಾನಯಾನ ಕಂಪೆನಿಗೆ ನಿರ್ದೇಶನ ನೀಡುವಂತೆ ಕೋರಿ ದಿಲ್ಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯೊಂದು ದಾಖಲಾಗಿದೆ.
ಪೈಲಟ್ಗಳ ವಿಶ್ರಾಂತಿಗೆ ಸಂಬಂಧಿಸಿದ ನೂತನ ನಿಯಮವನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಜಾರಿಗೆ ತಂದ ಬಳಿಕ, ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಪೈಲಟ್ಗಳ ಕೊರತೆಯಿಂದಾಗಿ ಸಾವಿರಾರು ವಿಮಾನಯಾನಗಳು ರದ್ದಾಗಿದ್ದವು. ಹೀಗೆ ರದ್ದುಗೊಂಡ ವಿಮಾನಗಳ ಪ್ರಯಾಣಿಕರಿಗೆ ಪರಿಹಾರ ಕೋರಿ ಸಲ್ಲಿಸಲಾಗಿರುವ ಅರ್ಜಿ ಇದಾಗಿದೆ.
ಈ ಅರ್ಜಿಯನ್ನು ಬುಧವಾರ ಮುಖ್ಯ ನ್ಯಾಯಾಧೀಶ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೇಲ ವಿಚಾರಣೆಗೆ ಎತ್ತಿಕೊಳ್ಳಲಿದ್ದಾರೆ.
ಬಿಕ್ಕಟ್ಟು ಉಲ್ಬಣಗೊಳ್ಳಲು ಡಿಜಿಸಿಎಯ ನಿರ್ಲಕ್ಷ್ಯ ಮತ್ತು ವೈಫಲ್ಯಗಳು ಕಾರಣವೇ ಎಂಬುದನ್ನು ಪತ್ತೆಹಚ್ಚಲು ನಿವೃತ ನ್ಯಾಯಾಧೀಶರು ಅಥವಾ ಲೋಕಪಾಲರಿಂದ ತನಿಖೆ ನಡೆಸುವಂತೆಯೂ ಸೆಂಟರ್ ಫಾರ್ ಅಕೌಂಟಬಿಲಿಟಿ ಆ್ಯಂಡ್ ಸಿಸ್ಟಮಿಕ್ ಚೇಂಜ್ (ಸಿಎಎಸ್ಸಿ) ಸಲ್ಲಿಸಿರುವ ಅರ್ಜಿ ಕೋರಿದೆ.