MGNREGAವು ಮೋದಿಯನ್ನು ಅಸ್ಥಿರಗೊಳಿಸುತ್ತಿತ್ತು: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ
“ಮಹಾತ್ಮಾ ಗಾಂಧಿಯನ್ನು ದ್ವೇಷಿಸುವ ಮೋದಿ”
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ, ಡಿ. 16: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಯ ಬದಲಿಗೆ ‘VB-G RAM G’ ಯೋಜನೆಯನ್ನು ತರುವ ಕೇಂದ್ರ ಸರಕಾರದ ಉದ್ದೇಶದ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ಕಿಡಿಗಾರಿದ್ದಾರೆ. ಇದು ಮಹಾತ್ಮಾ ಗಾಂಧಿಯವರ ಕಲ್ಪನೆಗಳಿಗೆ ಮಾಡಿದ ನೇರ ಅವಮಾನವಾಗಿದೆ ಎಂದು ಬಣ್ಣಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಪ್ರತಿಪಕ್ಷ ಸಂಸದರು, ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಅಜೀವಿಕ ಮಿಶನ್ (ಗ್ರಾಮೀಣ್) (VB-G RAM G) ಮಸೂದೆ, 2025ರ ವಿರುದ್ಧ ಸಂಸತ್ ಭವನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಮಸೂದೆಯನ್ನು ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆಯೇ, ಕೆಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಯಲ್ಲಿ ಮಂಡಿಸಿದರು. ಈ ಯೋಜನೆಯಿಂದ ಮಹಾತ್ಮಾ ಗಾಂಧಿ ಹೆಸರನ್ನು ಕೈಬಿಟ್ಟಿರುವುದನ್ನು ಪ್ರತಿಪಕ್ಷ ಸಂಸದರು ಬಲವಾಗಿ ಪ್ರತಿಭಟಿಸಿದರು.
ಪ್ರತಿಭಟನಾನಿರತ ಪ್ರತಿಪಕ್ಷ ಸಂಸದರ ಜೊತೆ ಸೇರಿಕೊಂಡ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ‘MGNREGA’ ಯೋಜನೆಯು ಪ್ರಧಾನಿ ಮೋದಿಯನ್ನು ಅಸ್ಥಿರಗೊಳಿಸುತ್ತಿತ್ತು ಎಂದು ಹೇಳಿದರು.
►ಮಹಾತ್ಮಾ ಗಾಂಧಿಯನ್ನು ದ್ವೇಷಿಸುವ ಮೋದಿ: ರಾಹುಲ್
ಕಳೆದ ಒಂದು ದಶಕದ ಅವಧಿಯಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಈ ಯೋಜನೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಾ ಬಂದಿದೆ ಎಂದು ಹೇಳಿದರು. ‘‘ಇಂದು, MGNREGAವನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಂಕಲ್ಪವನ್ನೇ ಅವರು ಮಾಡಿದ್ದಾರೆ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
‘‘ಮೋದೀ ಜಿ ಎರಡು ವಿಷಯಗಳನ್ನು ತಿವ್ರವಾಗಿ ದ್ವೇಷಿಸುತ್ತಾರೆ. ಅವುಗಳೆಂದರೆ- ಮಹಾತ್ಮಾ ಗಾಂಧಿಯ ಸಿದ್ಧಾಂತಗಳು ಮತ್ತು ಬಡವರ ಹಕ್ಕುಗಳು. MGNREGAವು ಗಾಂಧೀಜಿಯ ಗ್ರಾಮ ಸ್ವರಾಜ್ಯ ಕಲ್ಪನೆಯ ಸಾಕಾರ ರೂಪವಾಗಿದೆ. ಅದು ಕೋಟ್ಯಾಂತರ ಗ್ರಾಮೀಣ ಜನರ ಜೀವನಾಡಿಯಾಗಿತ್ತು. ಅದು ಕೋವಿಡ್ ಕಾಲದಲ್ಲಿ ಜನರ ಆರ್ಥಿಕ ಸುರಕ್ಷತೆಯ ಕವಚವೂ ಆಗಿತ್ತು’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಧಾನಿ ಮೋದಿ MGNREGAವನ್ನು ಕೇಂದ್ರೀಯ ನಿಯಂತ್ರಣದ ಸಾಧನವಾಗಿ ಪರಿವರ್ತಿಸಲು ಬಯಸಿದ್ದಾರೆ ಎಂದು ಅವರು ಆರೋಪಿಸಿದರು. ‘‘ಬಜೆಟ್ ಗಳು, ಯೋಜನೆಗಳು ಮತ್ತು ನಿಯಮಗಳನ್ನು ಕೇಂದ್ರ ಸರಕಾರ ಹೇರುತ್ತದೆ. ವೆಚ್ಚದ 40 ಶೇಕಡ ಪಾವತಿಸುವಂತೆ ರಾಜ್ಯಗಳ ಮೇಲೆ ಒತ್ತಡ ಹೇರಲಾಗುತ್ತದೆ. ಹಣ ಖಾಲಿಯಾದ ಬಳಿಕ ಅಥವಾ ಕಟಾವು ಋತುವಿನಲ್ಲಿ, ಕಾರ್ಮಿಕರಿಗೆ ತಿಂಗಳುಗಳ ಕಾಲ ಉದ್ಯೋಗ ನಿರಾಕರಿಸಲಾಗುತ್ತದೆ’’ ಎಂದರು.