×
Ad

ಅಕ್ರಮ ಹಣ ವರ್ಗಾವಣೆ ತನಿಖೆ: ಮುಂಬೈ, ಹೈದರಾಬಾದ್ ನಲ್ಲಿ ಅನಿಲ್ ಅಂಬಾನಿಯ ರಿಲಯನ್ಸ್ ಪವರ್ ಗೆ ಸಂಬಂಧಿಸಿದ ಸ್ಥಳಗಳ ಮೇಲೆ ED ದಾಳಿ

Update: 2026-03-06 14:48 IST

ಅನಿಲ್ ಅಂಬಾನಿ | Photo Credit : PTI 

ಹೊಸದಿಲ್ಲಿ: ಉದ್ಯಮಿ ಅನಿಲ್ ಅಂಬಾನಿಯ ರಿಲಯನ್ಸ್ ಪವರ್ ಲಿಮಿಟೆಡ್ ವಿರುದ್ಧ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಮುಂಬೈ ಹಾಗೂ ಹೈದರಾಬಾದ್ ನ ವಿವಿಧ ಸ್ಥಳಗಳ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತು.

“ರಿಲಯನ್ಸ್ ಪವರ್ ಲಿಮಿಟೆಡ್ ಹಾಗೂ ಅದರ ಅಧಿಕಾರಿಗಳಿಗೆ ಸಂಬಂಧಿಸಿದ ಸುಮಾರು 10-12 ಸ್ಥಳಗಳ ಮೇಲೆ ಎರಡು ನಗರಗಳಲ್ಲಿ ದಾಳಿ ನಡೆಸಲಾಗಿದೆ ಹಾಗೂ ಜಾರಿ ನಿರ್ದೇಶನಾಲಯದ 15 ತಂಡಗಳು ಈ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಮುಂಬೈನಲ್ಲಿರುವ ಅನಿಲ್ ಅಂಬಾನಿ ಮಾಲಕತ್ವದ ಸುಮಾರು 3,716 ಕೋಟಿ ರೂ. ಮೌಲ್ಯದ ‘ಅಡೋಬ್’ ನಿವಾಸವನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು.

ಇದೇ ವೇಳೆ 2013-17ರ ಅವಧಿಯಲ್ಲಿ ಬ್ಯಾಂಕ್ ಆಫ್ ಬರೋಡಾಗೆ ವಂಚನೆ ಎಸಗಿ, ಬ್ಯಾಂಕಿಗೆ ಸುಮಾರು 2,200 ಕೋಟಿ ರೂ. ನಷ್ಟವುಂಟು ಮಾಡಿದ ಆರೋಪದ ಮೇಲೆ ಅನಿಲ್ ಅಂಬಾನಿ ಹಾಗೂ ಆರ್ ಕಾಮ್ ವಿರುದ್ಧ ಹೊಸದಾಗಿ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.

ಅನಿಲ್ ಅಂಬಾನಿ ಮಾಲಕತ್ವದ ವಿವಿಧ ಸಮೂಹ ಸಂಸ್ಥೆಗಳು ಸಾಲ ವಂಚನೆಯ ಆರೋಪಗಳನ್ನು ಎದುರಿಸುತ್ತಿದ್ದು, ಈ ಎಲ್ಲ ಆರೋಪಗಳ ಕುರಿತು ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News