×
Ad

ಸ್ಪೈಸ್‌ಜೆಟ್ ಸಿಬ್ಬಂದಿಯ ಮೇಲೆ ಸೇನಾಧಿಕಾರಿಯಿಂದ ಮಾರಣಾಂತಿಕ ಹಲ್ಲೆ; ವಿಡಿಯೋ ವೈರಲ್

Update: 2025-08-03 16:25 IST

Screengrab:X/@AnkurSharma__

ಶ್ರೀನಗರ: ಶ್ರೀನಗರ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಕ್ಯಾಬಿನ್ ಸಾಮಾನುಗಳನ್ನು ಹೊತ್ತೊಯ್ಯಲು ಅನುಮತಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಹಿರಿಯ ಸೇನಾ ಅಧಿಕಾರಿಯೊಬ್ಬರು ಸ್ಪೈಸ್‌ಜೆಟ್ ನ ನಾಲ್ವರು ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.

ರವಿವಾರ ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ, ಸಿಬ್ಬಂದಿಯ ಬೆನ್ನು ಮೂಳೆ, ದವಡೆ ಮುರಿದಿದೆ. ಗಂಭೀರ ಗಾಯಗಳಾಗಿವೆ ಎಂದು ತಿಳಿಸಿದೆ.

ಘಟನೆ ಜುಲೈ 26ರಂದು ದಿಲ್ಲಿಗೆ ತೆರಳಬೇಕಿದ್ದ ವಿಮಾನದ ಚೆಕ್-ಇನ್ ಪ್ರಕ್ರಿಯೆ ಸಂದರ್ಭದಲ್ಲಿ ನಡೆದಿದೆ. ಸೇನಾ ಅಧಿಕಾರಿ ಅನುಮತಿಸಲಾದ 7 ಕೆ.ಜಿ ಗಿಂತ ಎರಡುಪಟ್ಟು ಅಧಿಕವಾದ, ಒಟ್ಟು 16 ಕೆ.ಜಿ ತೂಕದ ಎರಡು ಬ್ಯಾಗ್‌ ಗಳನ್ನು ಕ್ಯಾಬಿನ್‌ಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದರು. ಸಿಬ್ಬಂದಿ, ಅಧಿಕಾರಿಗೆ ನಿಯಮಗಳ ಬಗ್ಗೆ ಮಾಹಿತಿ ನೀಡಿದಾಗ ಹಾಗೂ ಹೆಚ್ಚುವರಿ ಶುಲ್ಕ ಪಾವತಿಸಲು ಸೂಚಿಸಿದಾಗ ಅಧಿಕಾರಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಸ್ಪೈಸ್‌ಜೆಟ್ ಹೇಳಿಕೆಯ ಪ್ರಕಾರ, ಅಧಿಕಾರಿಯು ಬೋರ್ಡಿಂಗ್ ಪ್ರಕ್ರಿಯೆ ಪೂರ್ಣಗೊಳ್ಳದೆ ಬಲವಂತವಾಗಿ ಏರೋಬ್ರಿಡ್ಜ್‌ಗೆ ಪ್ರವೇಶಿಸಿದರು. ಇದು ವಿಮಾನಯಾನ ಭದ್ರತಾ ನಿಯಮಗಳ ಉಲ್ಲಂಘನೆ. ಬಳಿಕ ಸಿಐಎಸ್‌ಎಫ್ ಅಧಿಕಾರಿಯೊಬ್ಬರು ಅವರನ್ನು ವಾಪಸ್ ಕಳುಹಿಸಿದಾಗ ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಿರುಗಿತು ಎನ್ನಲಾಗಿದೆ.

ಸೇನಾ ಅಧಿಕಾರಿಯು ತೀವ್ರ ಆಕ್ರಮಣಕಾರಿಯಾಗಿ ನಡೆದು, ಸ್ಟೀಲ್ ಸೈನ್‌ಬೋರ್ಡ್ ಸ್ಟ್ಯಾಂಡ್ ಬಳಸಿಕೊಂಡು ಸಿಬ್ಬಂದಿಗೆ ಹಲ್ಲೆ ನಡೆಸಿದರು ಎನ್ನಲಾಗಿದೆ. ಈ ದಾಳಿಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಒಬ್ಬ ಉದ್ಯೋಗಿಯ ಬೆನ್ನುಮೂಳೆ ಮುರಿದಿರುವುದು ಮತ್ತು ಇನ್ನೊಬ್ಬರಿಗೆ ದವಡೆಗೆ ತೀವ್ರ ಹಾನಿಯಾದದ್ದು ದೃಢಪಟ್ಟಿದೆ. ಒಬ್ಬ ಸಿಬ್ಬಂದಿ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿದಾಗಲೂ ಅಧಿಕಾರಿಯು ಅವರನ್ನು ಒದೆಯುತ್ತಲೇ ಇದ್ದರು ಎಂದು ಸ್ಪೈಸ್‌ಜೆಟ್ ತಿಳಿಸಿದೆ.

ಘಟನೆ ಸಂಬಂಧ ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಹಸ್ತಾಂತರಿಸಲಾಗಿದೆ. ಸ್ಪೈಸ್‌ಜೆಟ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸೇನಾ ಅಧಿಕಾರಿ, ಪ್ರಯಾಣಿಕನನ್ನು 'ನೋ ಫ್ಲೈ' ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿದು ಬಂದಿದೆ.

ಸ್ಪೈಸ್‌ಜೆಟ್ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಈ ಕುರಿತು ಪತ್ರ ಬರೆದಿದ್ದು, ಘಟನೆಯ ವಿವರ ನೀಡುವ ಜೊತೆಗೆ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿನಂತಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News