×
Ad

ಚೀನಾದಿಂದ ಜಗತ್ತಿನ ಅತಿ ದೊಡ್ಡ ಅಣೆಕಟ್ಟು ನಿರ್ಮಾಣ | ಅಪಾಯದ ಜಲ ಬಾಂಬ್: ಅರುಣಾಚಲ ಮುಖ್ಯಮಂತ್ರಿ

Update: 2025-07-09 21:07 IST

 ಪೆಮಾ ಖಂಡು | PC : PTI

ಇಟಾನಗರ (ಅರುಣಾಚಲಪ್ರದೇಶ): ಅರುಣಾಚಲಪ್ರದೇಶದ ಗಡಿ ಸಮೀಪದಲ್ಲಿ ಚೀನಾ ನಿರ್ಮಿಸುತ್ತಿರುವ ಬೃಹತ್ ಅಣೆಕಟ್ಟು ‘‘ಅಪಾಯದ ಎಚ್ಚರಿಕೆಯನ್ನು ನೀಡುತ್ತಿರುವ ಜಲ ಬಾಂಬ್’’ನಂತಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಪೆಮಾ ಖಂಡು ಮಂಗಳವಾರ ಹೇಳಿದ್ದಾರೆ.

ಟಿಬೆಟ್ನಲ್ಲಿ ‘‘ಯಾರ್ಲುಂಗ್ ಟ್ಸಾಂಗ್ಪೊ’’ ಎಂಬುದಾಗಿ ಕರೆಯಲ್ಪಡುವ ಬ್ರಹ್ಮಪುತ್ರ ನದಿಗೆ ಜಗತ್ತಿನ ಅತ್ಯಂತ ದೊಡ್ಡ ಅಣೆಕಟ್ಟು ಕಟ್ಟುವುದು ಅತ್ಯಂತ ಗಂಭೀರ ಕಳವಳದ ವಿಷಯವಾಗಿದೆ. ಯಾಕೆಂದರೆ, ಚೀನಾವು ಅಂತರರಾಷ್ಟ್ರೀಯ ಜಲ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಸಹಿ ಹಾಕಿದ್ದರೆ, ಅಂತರರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಒಪ್ಪಂದವು ಚೀನಾದ ಮೇಲೆ ಒತ್ತಡ ಹೇರುತ್ತಿತ್ತು ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಖಂಡು ಹೇಳಿದ್ದಾರೆ.

‘‘ಸಮಸ್ಯೆಯೆಂದರೆ, ಚೀನಾವನ್ನು ನಂಬುವಂತಿಲ್ಲ. ಅವರು ಏನು ಮಾಡಬಹುದು ಎನ್ನುವುದು ಯಾರಿಗೂ ಗೊತ್ತಿಲ್ಲ’’ ಎಂದು ಖಂಡು ನುಡಿದರು.

‘‘ಚೀನಾದ ಸೇನಾ ಬೆದರಿಕೆಯನ್ನು ಒಮ್ಮೆ ಬದಿಗಿಡೊಣ. ಇತರ ಯಾವುದೇ ಬೆದರಿಕೆಗಳಿಗಿಂತಲೂ ಇದು ಅತ್ಯಂತ ದೊಡ್ಡ ಬೆದರಿಕೆ ಎಂಬುದಾಗಿ ನನಗೆ ಅನಿಸುತ್ತದೆ. ಅದು ನಮ್ಮ ಬುಡಕಟ್ಟುಗಳ ಅಸ್ತಿತ್ವಕ್ಕೆ ಮತ್ತು ಅವರ ಜೀವನೋಪಾಯಕ್ಕೆ ಎದುರಾಗಿರುವ ಬೆದರಿಕೆಯಾಗಿದೆ. ಇದು ಅತ್ಯಂತ ಗಂಭೀರವಾಗಿದೆ. ಯಾಕೆಂದರೆ, ಚೀನಾವು ಈ ಅಣೆಕಟ್ಟನ್ನು ‘ಜಲ ಬಾಂಬ್’ನಂತೆಯೂ ಬಳಸಬಹುದಾಗಿದೆ’’ ಎಂದು ಅರುಣಾಚಲಪ್ರದೇಶದ ಮುಖ್ಯಮಂತ್ರಿ ನುಡಿದರು.

ಅಂತರರಾಷ್ಟ್ರೀಯ ನೀರು ಹಂಚಿಕೆ ಒಪ್ಪಂದಗಳಿಗೆ ಚೀನಾ ಸಹಿ ಹಾಕಿದ್ದರೆ, ಈ ಅಣೆಕಟ್ಟು ಯೋಜನೆಯು ವರವಾಗುತ್ತಿತ್ತು. ಯಾಕೆಂದರೆ ಅದು ಅರುಣಾಚಲಪ್ರದೇಶ, ಅಸ್ಸಾಮ್ ಮತ್ತು ಬಾಂಗ್ಲಾದೇಶದ ಬೇಸಿಗೆ ಪ್ರವಾಹವನ್ನು ತಡೆಯುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಆದರೆ, ಚೀನಾ ಸಹಿ ಹಾಕಿಲ್ಲ. ಇದೇ ಸಮಸ್ಯೆಯಾಗಿದೆ. ಒಂದು ವೇಳೆ ಅಣೆಕಟ್ಟು ಪೂರ್ಣಗೊಂಡು ಅವರು ಒಮ್ಮೆಲೇ ನೀರು ಬಿಟ್ಟರೆ, ನಮ್ಮ ಇಡೀ ಸಿಯಾಂಗ್ ವಲಯವೇ ನಾಶವಾಗುತ್ತದೆ. ಮುಖ್ಯವಾಗಿ ಆದಿ ಬುಡಕಟ್ಟು ಹಾಗೂ ಅಂಥದೇ ಬುಡಕಟ್ಟು ಗುಂಪುಗಳು ನಾಶಗೊಳ್ಳುತ್ತವೆ. ಅವರ ಜಮೀನುಗಳು, ಮನೆಗಳು, ಮಾನವ ಜೀವಗಳು ನಾಶಗೊಳ್ಳುತ್ತವೆ’’ ಎಂದು ಮುಖ್ಯಮಂತ್ರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News