ಮೋದಿ ಸರಕಾರ ಆರ್‌ಟಿಐ ಕಾಯ್ದೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ: ಮಲ್ಲಿಕಾರ್ಜುನ ಖರ್ಗೆ ಆರೋಪ
ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ, ಜ. 30: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ. ಗುರುವಾರ ಸಂಸತ್‌ನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯು ಮಾಹಿತಿ ಹಕ್ಕು ಕಾಯ್ದೆಯ ಮರುಪರಿಶೀಲನೆಗೆ ಕರೆ ನೀಡಿರುವುದನ್ನು ಉಲ್ಲೇಖಿಸಿರುವ ಅವರು, ಅದರ ಅಗತ್ಯವನ್ನು ಪ್ರಶ್ನಿಸಿದ್ದಾರೆ.
ಮಾಹಿತಿಯನ್ನು ತಡೆಹಿಡಿಯಲು ‘‘ಸಚಿವಾಲಯ ವೀಟೊ’’ ಪ್ರಸ್ತಾವವನ್ನು ಸಮೀಕ್ಷೆ ಮುಂದಿಟ್ಟಿದೆ ಹಾಗೂ ಸರಕಾರಿ ಸೇವಾ ದಾಖಲೆಗಳು, ವರ್ಗಾವಣೆಗಳು ಮತ್ತು ಅಧಿಕಾರಿಗಳ ಇಲಾಖಾ ವರದಿಗಳು ಸಾರ್ವಜನಿಕರಿಗೆ ಸಿಗುವುದನ್ನು ತಡೆಯುವ ಸಾಧ್ಯತೆಯ ಪರಿಶೀಲನೆಗೆ ಮುಂದಾಗಿದೆ ಎಂದು ಖರ್ಗೆ ಹೇಳಿದರು.
‘‘2019ರಲ್ಲಿ ಮೋದಿ ಸರಕಾರವು ಆರ್‌ಟಿಐ ಕಾಯ್ದೆಗೆ ಮೊದಲ ಪ್ರಹಾರವನ್ನು ನೀಡಿತು. ಮಾಹಿತಿ ಆಯುಕ್ತರುಗಳ ಅವಧಿ ಮತ್ತು ವೇತನವನ್ನು ನಿಯಂತ್ರಿಸುವ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಿತು. ಆ ಮೂಲಕ ಸ್ವತಂತ್ರ ಕಾವಲುನಾಯಿಗಳನ್ನು ಶರಣಾಗತ ಕೆಲಸಗಾರರನ್ನಾಗಿ ಪರಿವರ್ತಿಸಿತು’’ ಎಂದು ಖರ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
2025ರ ಕೊನೆಯ ವೇಳೆಗೆ, 26,000ಕ್ಕೂ ಅಧಿಕ ಆರ್‌ಟಿಐ ಪ್ರಕರಣಗಳು ಬಾಕಿಯಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಹೇಳಿದರು. 2023ರ ಡಿಜಿಟಲ್ ಖಾಸಗಿ ದತ್ತಾಂಶ ರಕ್ಷಣಾ ಕಾಯ್ದೆಯು ಆರ್‌ಟಿಐಯ ಸಾರ್ವಜನಿಕ ಹಿತಾಸಕ್ತಿ ಪರಿಚ್ಚೇದವನ್ನು ಬಲಿ ಪಡೆಯಿತು; ಆ ಕಾಯ್ದೆಯು ಭ್ರಷ್ಟಾಚಾರವನ್ನು ರಕ್ಷಿಸಲು ಮತ್ತು ಪರಿಶೀಲನೆಯನ್ನು ತಡೆಯಲು ಖಾಸಗಿತನವನ್ನು ಅಸ್ತ್ರವಾಗಿ ಬಳಸಿಕೊಂಡಿತು ಎಂದು ಖರ್ಗೆ ಹೇಳಿದರು.
‘‘2025 ಡಿಸೆಂಬರ್‌ವರೆಗೂ ಕೇಂದ್ರ ಮಾಹಿತಿ ಆಯೋಗವು ಮುಖ್ಯ ಮಾಹಿತಿ ಆಯುಕ್ತರಿಲ್ಲದೆಯೇ ಕಾರ್ಯನಿರ್ವಹಿಸುತ್ತಿತ್ತು. ಈ ಮಹತ್ವದ ಹುದ್ದೆಯನ್ನು 11 ವರ್ಷಗಳಲ್ಲಿ ಏಳನೇ ಬಾರಿಗೆ ಉದ್ದೇಶಪೂರ್ವಕವಾಗಿ ಖಾಲಿಯಾಗಿಟ್ಟಿತು’’ ಎಂದು ಅವರು ಬೆಟ್ಟುಮಾಡಿದರು.
100ಕ್ಕೂ ಅಧಿಕ ಆರ್‌ಟಿಐ ಕಾರ್ಯಕರ್ತರ ಕೊಲೆ
2014ರ ಬಳಿಕ, 100ಕ್ಕೂ ಅಧಿಕ ಆರ್‌ಟಿಐ ಕಾರ್ಯಕರ್ತರ ಕೊಲೆ ನಡೆದಿದೆ ಎಂದು ಹೇಳಿದ ಮಲ್ಲಿಕಾರ್ಜುನ ಖರ್ಗೆ, ಸತ್ಯಾನ್ವೇಷಿಗಳನ್ನು ಶಿಕ್ಷಿಸಲು ಮತ್ತು ಭಿನ್ನಮತವನ್ನು ನಿರ್ಮೂಲಗೊಳಿಸಲು ಭಯದ ವಾತಾವರಣವನ್ನು ಹಬ್ಬಿಸಲಾಗುತ್ತಿದೆ ಎಂದರು.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಅಂಗೀಕರಿಸಲಾಗಿರುವ ಧ್ವನಿ-ಎತ್ತುವವರ ರಕ್ಷಣಾ ಕಾಯ್ದೆ, 2014ನ್ನು ಈವರೆಗೂ ಜಾರಿಗೊಳಿಸಲಾಗಿಲ್ಲ ಎಂದು ಖರ್ಗೆ ಹೇಳಿದರು. ‘‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗ)ಯನ್ನು ಕೊಂದ ಬಳಿಕ, ಮುಂದಿನ ಸರದಿ ಆರ್‌ಟಿಐದ್ದಾ?’’ ಎಂದು ಅವರು ಪ್ರಶ್ನಿಸಿದ್ದಾರೆ.