×
Ad

ಸಾಮೂಹಿಕ ಅತ್ಯಾಚಾರ ಪ್ರಕರಣ| ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ

Update: 2026-01-30 20:41 IST

 ಮೊಯಿದ್ ಖಾನ್ | Photo Credit : X

ಲಕ್ನೋ,ಜ.30: ಬಹುಚರ್ಚಿತ ಅಯೋಧ್ಯೆಯ ಭದರಸಾ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿದ್ದು, ಡಿಎನ್‌ಎ ಪರೀಕ್ಷೆಯ ಆಧಾರದಲ್ಲಿ ಅವರ ಮನೆಗೆಲಸದಾಳು ರಾಜು ಖಾನ್‌ನನ್ನು ದೋಷಿಯೆಂದು ಘೋಷಿಸಿದೆ. ನ್ಯಾಯಾಲಯದ ತೀರ್ಪು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ಖಾನ್ ಮತ್ತು ರಾಜು ತನ್ನ 12ರ ಹರೆಯದ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವಳು 2024, ಜು.29ರಂದು ಭದರಸಾ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು. 2024, ಜು.30ರಂದು ಪೋಲಿಸರು ಖಾನ್ ಮತ್ತು ರಾಜು ಅವರನ್ನು ಬಂಧಿಸಿದ್ದರು.

ಖಾನ್ ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರಿಂದ ಪ್ರಕರಣವು ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡಿತ್ತು ಮತ್ತು ಖಾನ್ ಅಯೋಧ್ಯೆಯ ಎಸ್‌ಪಿ ಸಂಸದ ಅವಧೇಶ್‌ ಪ್ರಸಾದರ ಆಪ್ತರಾಗಿದ್ದರಿಂದ ಈ ವಿಷಯದಲ್ಲಿ ಪ್ರಸಾದ್‌ ಅವರನ್ನು ಎಳೆದುತರಲು ಮತ್ತು ಎಸ್‌ಪಿಗೆ ಕಳಂಕವನ್ನುಂಟು ಮಾಡಲು ಪ್ರಯತ್ನಗಳೂ ನಡೆದಿದ್ದವು. 2024, ಆ.1ರಂದು ರಾಜ್ಯ ವಿಧಾನಸಭೆಯಲ್ಲಿಯೂ ಈ ಪ್ರಕರಣವು ಪ್ರಸ್ತಾವಗೊಂಡಿತ್ತು.

ಉತ್ತರ ಪ್ರದೇಶ ಸರಕಾರದ ಸೂಚನೆಯ ಮೇರೆಗೆ ಅಯೋಧ್ಯೆ ಆಡಳಿತವು 2024, ಆ.3ರಂದು ಖಾನ್ ಅವರಿಗೆ ಸೇರಿದ ಬೇಕರಿ ಮತ್ತು ಬಹು ಅಂತಸ್ತುಗಳ ಮನೆಯನ್ನು ನೆಲಸಮಗೊಳಿಸಿತ್ತು. ಆ.6ರಂದು ಸಂತ್ರಸ್ತ ಬಾಲಕಿಗೆ ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿವಿಯಲ್ಲಿ ವೈದ್ಯಕೀಯ ಗರ್ಭಪಾತ ಮಾಡಿಸಲಾಗಿತ್ತು ಮತ್ತು ಭ್ರೂಣದ ಡಿಎನ್‌ಎ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿತ್ತು. ಆ.7ರಂದು ಆರೋಪಿಗಳ ಡಿಎನ್‌ಎ ಮಾದರಿಗಳನ್ನು ಪಡೆದುಕೊಳ್ಳಲಾಗಿತ್ತು. ಸೆ.30, 2024ರಂದು ಮುಚ್ಚಿದ ಲಕೋಟೆಯಲ್ಲಿ ಡಿಎನ್‌ಎ ಪರೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ರಾಜುವಿನ ಡಿಎನ್‌ಎ ಸ್ಯಾಂಪಲ್ ತಾಳೆಯಾಗಿದ್ದರೆ, ಖಾನ್ ಅವರ ಸ್ಯಾಂಪಲ್ ತಾಳೆಯಾಗಿರಲಿಲ್ಲ.

ಬಳಿಕ ಪ್ರಕರಣವನ್ನು ಅಯೋಧ್ಯೆಯಲ್ಲಿನ ಪೊಕ್ಸೊ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ವಿಚಾರಣೆ ನಡೆಯುತ್ತಿರುವಾಗಲೇ ಯೋಗಿ ಸರಕಾರವು ಖಾನ್ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯನ್ನು ಹೇರಿತ್ತು.

ಘಟನೆಯ ವೀಡಿಯೊ ಇದೆ ಎಂದು ಹೇಳಲಾಗಿತ್ತಾದರೂ ನ್ಯಾಯಾಲದಲ್ಲಿ ಪುರಾವೆಯಾಗಿ ಅಂತಹ ಯಾವುದೇ ವೀಡಿಯೊವನ್ನು ಹಾಜರುಪಡಿಸಿರಲಿಲ್ಲ. ಘಟನೆ ನಡೆದಿದ್ದ ಸ್ಥಳದ ಕುರಿತು ಹಲವಾರು ವಿರೋಧಾಭಾಸಗಳನ್ನು ಪೋಲಿಸರ ತನಿಖೆಯು ಬಹಿರಂಗಗೊಳಿಸಿತ್ತು. ತಾನು ರಾಜಕೀಯ ಒತ್ತಡದಡಿ ಪ್ರಕರಣವನ್ನು ದಾಖಲಿಸಿದ್ದಾಗಿ ಸಂತ್ರಸ್ತೆಯ ತಾಯಿ ಸ್ವತಃ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಳು.

2026, ಜ.28ರಂದು ವಿಶೇಷ ನ್ಯಾಯಾಧೀಶೆ ನಿರುಪಮಾ ವಿಕ್ರಮ ಅವರು ಖಾನ್ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದು, ರಾಜುವನ್ನು ದೋಷಿಯೆಂದು ಹೇಳಿದ್ದಾರೆ.

2025, ಅ.16ರಂದು ಉಚ್ಚ ನ್ಯಾಯಾಲಯವು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಖಾನ್‌ಗೆ ಜಾಮೀನು ಮಂಜೂರು ಮಾಡಿದ್ದು, ಈಗ ಪೊಕ್ಸೊ ನ್ಯಾಯಾಲಯವು ಖುಲಾಸೆಗೊಳಿಸಿದೆ. ಆದಾಗ್ಯೂ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಪ್ರಕರಣವು ಬಾಕಿಯಿರುವುದರಿಂದ ಖಾನ್ ಅವರ ಜೈಲುವಾಸ ಮುಂದುವರಿಯಲಿದೆ. ಈ ಪ್ರಕರಣದಲ್ಲಿಯೂ ಅವರು ಶೀಘ್ರವೇ ಖುಲಾಸೆಗೊಳ್ಳುವ ನಿರೀಕ್ಷೆಯಿದೆ.

ಅಯೋಧ್ಯೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎಸ್‌ಪಿ ಎದುರು ಬಿಜೆಪಿ ಸೋತಿದ್ದರಿಂದ ಸಂಸದ ಅವಧೇಶ ಪ್ರಸಾದರನ್ನು ಬಲೆಗೆ ಸಿಲುಕಿಸಲು ಮತ್ತು ಪಕ್ಷದ ಹೆಸರಿಗೆ ಕಳಂಕವನ್ನುಂಟು ಮಾಡಲು ಬಿಜೆಪಿ ನಾಯಕರು ಪ್ರಯತ್ನಿಸಿದ್ದರಾದರೂ ಅದು ವಿಫಲಗೊಂಡಿದೆ ಎನ್ನಲಾಗಿದೆ.

ಈಗ ನ್ಯಾಯಾಲಯದ ತೀರ್ಪಿನ ಬಳಿಕ ಬಿಜೆಪಿ ಮೌನವಾಗಿದೆ ಮತ್ತು ಯೋಗಿ ಸರಕಾರವು ಹಿನ್ನಡೆಯನ್ನು ಅನುಭವಿಸಿದೆ.

ಖಾನ್ ಅವರ ಆಸ್ತಿಗಳನ್ನು ನೆಲಸಮಗೊಳಿಸಲಾಗಿದ್ದು, ಅದಕ್ಕೆ ಪರಿಹಾರವನ್ನು ಯಾರು ನೀಡುತ್ತಾರೆ ಎನ್ನುವುದು ಉತ್ತರಕ್ಕಾಗಿ ಕಾಯಲಾಗುತ್ತಿರುವ ಈಗಿನ ದೊಡ್ಡ ಪ್ರಶ್ನೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News