×
Ad

ದೇಶದಲ್ಲಿಯೇ ಪ್ರಥಮ ಬಾರಿಗೆ ಕೇರಳದಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಬಜೆಟ್!

Update: 2026-01-30 19:26 IST

Photo Credit : PTI 

ತಿರುವನಂತಪುರಂ: ದೇಶದಲ್ಲಿಯೇ ಮೊದಲ ಬಾರಿಗೆ ಹಿರಿಯ ನಾಗರಿಕರಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ ಕೀರ್ತಿಗೆ ಕೇರಳ ರಾಜ್ಯ ಭಾಜನವಾಗಿದೆ.

ನಿನ್ನೆ ಕೇರಳ ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು 2026–27ನೇ ಸಾಲಿನ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದರು.

ಕೇರಳದಲ್ಲಿ ಹಿರಿಯ ನಾಗರಿಕರ (60 ವರ್ಷ ಮೇಲ್ಪಟ್ಟವರು) ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿದೆ. ಹಿರಿಯ ನಾಗರಿಕರಿಗೆ ಅಗತ್ಯವಾದ ವಿಶೇಷ ಗಮನ ನೀಡಬೇಕಾದ ಸಮಯ ಇದೀಗ ಬಂದಿದೆ ಎಂದು ಬಜೆಟ್ ಪ್ರಸ್ತಾಪದಲ್ಲಿ ಉಲ್ಲೇಖಿಸಲಾಗಿದೆ.

ಹಿರಿಯ ನಾಗರಿಕರಿಗಾಗಿ ಹಿರಿಯ ನಾಗರಿಕರ ಆಯೋಗ ಸ್ಥಾಪನೆ, ಅದಕ್ಕಾಗಿ ವಾರ್ಷಿಕ 30 ಕೋಟಿ ರೂ. ಅನುದಾನ ಮೀಸಲು, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸ್ವಯಂಸೇವಕ ಪಡೆಗಳ ಸ್ಥಾಪನೆ, ಅವರ ಮೂಲಕ 24x7 ಸಹಾಯ ವ್ಯವಸ್ಥೆ ಕಲ್ಪಿಸುವುದು, ಡಿಜಿಟಲ್ ಪೋರ್ಟಲ್ ಮೂಲಕ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಕಲ್ಯಾಣ ಯೋಜನೆಗಳು ಮತ್ತು ಕುಂದುಕೊರತೆಗಳ ಪರಿಹಾರ, ವೈದ್ಯಕೀಯ ನೆರವು, ಕಾನೂನು ಸೇವೆ ಹಾಗೂ ಸುರಕ್ಷತೆ ಮೇಲ್ವಿಚಾರಣೆ ನಡೆಸಲಾಗುವುದು ಎಂದು ಸಚಿವ ಕೆ.ಎನ್. ಬಾಲಗೋಪಾಲ್ ಘೋಷಿಸಿದ್ದಾರೆ.

ಹಿರಿಯ ನಾಗರಿಕರ ಸಹಾಯಕ್ಕಾಗಿ ಸ್ಥಾಪಿಸಲಾಗುವ ಸ್ವಯಂಸೇವಕ ಪಡೆಗಳಿಗೆ ಸುಮಾರು 10 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇರಳದ ಒಟ್ಟು ಜನಸಂಖ್ಯೆ (ಅಂದಾಜು 3.5 ಕೋಟಿ)ಯಲ್ಲಿ ಶೇ.18.7ರಷ್ಟು ಮಂದಿ ಹಿರಿಯ ನಾಗರಿಕರು. ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದೆ. ಹೀಗಾಗಿ, ಆರ್ಥಿಕ ದೃಷ್ಟಿಯಿಂದಲೂ ಹಿರಿಯ ನಾಗರಿಕರು ರಾಜ್ಯಕ್ಕೆ ಅತ್ಯಂತ ಮಹತ್ವದವರು. ಅವರನ್ನು ಕೇಂದ್ರವಾಗಿಟ್ಟುಕೊಂಡು ಪ್ರತ್ಯೇಕ ಬಜೆಟ್ ಮಂಡಿಸುವುದು ಆ ಕ್ಷೇತ್ರದಲ್ಲಿನ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇರಳದಲ್ಲಿ ಯುವಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದರೆ ಹಿರಿಯ ನಾಗರಿಕರ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ಶೀಘ್ರದಲ್ಲೇ ಈ ಪ್ರಮಾಣ ಶೇ.25ನ್ನೂ ಮೀರಲಿದೆ ಎಂದು ಅವರು ತಿಳಿಸಿದ್ದಾರೆ.

ಇಡೀ ದೇಶದಲ್ಲಿ ಅತಿ ಹೆಚ್ಚು ಹಿರಿಯ ನಾಗರಿಕರನ್ನು ಹೊಂದಿರುವ ರಾಜ್ಯವಾಗಿ ಕೇರಳ ಹೊರಹೊಮ್ಮುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News