ನೂತನ ನಿಯಮ ಜಾರಿಯಲ್ಲಿ ವಿನಾಯಿತಿ ಏಕೆ? ಡಿಜಿಸಿಎಗೆ ದಿಲ್ಲಿ ಹೈಕೋರ್ಟ್ ಪ್ರಶ್ನೆ
ದಿಲ್ಲಿ ಹೈಕೋರ್ಟ್ | Photo Credit : PTI
ಹೊಸದಿಲ್ಲಿ, ಜ. 30: ಪೈಲಟ್‌ಗಳ ವಾರದ ವಿಶ್ರಾಂತಿ ಮತ್ತು ರಜೆಗಳಿಗೆ ಸಂಬಂಧಿಸಿದ ನೂತನ ನಿಯಮಾವಳಿಗಳ ಜಾರಿಯಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಯಾಕೆ ಅನಿರ್ದಿಷ್ಟ ವಿನಾಯಿತಿ ನೀಡಲಾಗಿದೆ ಎಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ವನ್ನು ಪ್ರಶ್ನಿಸಿದೆ.
ವಿನಾಯಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಾಧೀಶ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯ ಅವರನ್ನೊಳಗೊಂಡ ಹೈಕೋರ್ಟ್ ನ್ಯಾಯಪೀಠವೊಂದು ಡಿಜಿಸಿಎಗೆ ನೋಟಿಸ್ ಜಾರಿಗೊಳಿಸಿತು. ನೂತನ ನಿಯಮಾವಳಿಗಳನ್ನು ತಕ್ಷಣದಿಂದ ಹಿಂದಕ್ಕೆ ಪಡೆದುಕೊಳ್ಳುವ ನಿರ್ಧಾರದ ಹಿಂದಿನ ‘‘ತರ್ಕ’’ವನ್ನು ವಿವರಿಸುವಂತೆ ನ್ಯಾಯಾಲಯವು ಅದಕ್ಕೆ ಸೂಚಿಸಿತು.
ಕಳೆದ ವರ್ಷದ ಡಿಸೆಂಬರ್ 5ರಂದು ಡಿಜಿಸಿಎ ಪೈಲಟ್‌ಗಳ ನೂತನ ವಿಶ್ರಾಂತಿ ನಿಯಮಗಳ ಪಾಲನೆಗೆ ವಿನಾಯಿತಿ ಘೋಷಿಸಿದೆ. ವಿಮಾನ ಸಂಚಾರ ಅವ್ಯವಸ್ಥೆಯನ್ನು ನಿಭಾಯಿಸುವುದಕ್ಕಾಗಿ ಹೆಚ್ಚಿನ ಪೈಲಟ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲು ಇಂಡಿಗೊ ವಿಮಾನಯಾನ ಸಂಸ್ಥೆಗೆ ಸಾಧ್ಯವಾಗುವಂತೆ ಮಾಡಲು ವಿನಾಯಿತಿಯನ್ನು ಘೋಷಿಸಲಾಗಿತ್ತು.
ಪೈಲಟ್‌ಗಳ ಕರ್ತವ್ಯಕ್ಕೆ ಸಂಬಂಧಿಸಿದ ನೂತನ ನಿಯಮಗಳಿಗೆ ಇಂಡಿಗೊ ಸಿದ್ಧತೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ, ಕಳೆದ ವರ್ಷದ ಡಿಸೆಂಬರ್ ಮೊದಲ ವಾರದಲ್ಲಿ ವಿಮಾನಗಳ ಹಾರಾಟಕ್ಕೆ ಪೈಲಟ್‌ಗಳು ಸಿಗದೆ ಸಾವಿರಾರು ವಿಮಾಯಾನಗಳು ರದ್ದುಗೊಂಡಿದ್ದವು.
ಪ್ರಕರಣದ ಮುಂದಿನ ವಿಚಾರಣೆ ಎಪ್ರಿಲ್‌ನಲ್ಲಿ ನಡೆಯಲಿದೆ.