×
Ad

‘ಮಿಯಾ’ ಮುಸ್ಲಿಮರು ಬಿಜೆಪಿಯ ಶತ್ರುಗಳಲ್ಲ: ಹೈಕೋರ್ಟ್ ನೋಟಿಸ್ ಬಳಿಕ ವರಸೆ ಬದಲಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

Update: 2026-03-07 17:15 IST

ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ | Photo Credit : PTI 

ಗುವಾಹಟಿ: ‘ಮಿಯಾ’ ಮುಸ್ಲಿಮರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಶತ್ರುಗಳೆಂದು ಪರಿಗಣಿಸುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ದ್ವೇಷ ಭಾಷಣದ ಆರೋಪದ ಹಿನ್ನೆಲೆಯಲ್ಲಿ ಗುವಾಹಟಿ ಹೈಕೋರ್ಟ್ ಅವರಿಗೆ ನೋಟಿಸ್ ನೀಡಿದ ಒಂದು ವಾರದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಆದರೆ ಆ ಸಮುದಾಯದ ಕೆಲವರಲ್ಲಿ ಕಂಡುಬರುವ ವಿವಿಧ ರೀತಿಯ ‘ಜಿಹಾದ್’ ಚಟುವಟಿಕೆಗಳು ಹಾಗೂ ಬಾಲ್ಯವಿವಾಹಗಳಂತಹ ಪದ್ಧತಿಗಳ ಬಗ್ಗೆ ಬಿಜೆಪಿಗೆ ವಿರೋಧವಿದೆ ಎಂದು ಅವರು ಹೇಳಿದ್ದಾರೆ.

ಉತ್ತರ ಭಾರತದಲ್ಲಿ ‘ಮಿಯಾ’ ಎಂಬ ಪದವನ್ನು ಸಾಮಾನ್ಯವಾಗಿ ಗೌರವ ಸೂಚಕವಾಗಿ ಬಳಸಲಾಗುತ್ತದೆ. ಆದರೆ ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಅಥವಾ ಬಂಗಾಳ ಮೂಲದ ಮುಸ್ಲಿಮರನ್ನು ಸೂಚಿಸಲು ಈ ಪದವನ್ನು ಹಲವೊಮ್ಮೆ ಅವಹೇಳನಾತ್ಮಕವಾಗಿ ಬಳಸಲಾಗುತ್ತದೆ. ಇಂತಹವರನ್ನು ಹೆಚ್ಚಾಗಿ ಬಾಂಗ್ಲಾದೇಶ ಮೂಲದವರು ಅಥವಾ ಅಕ್ರಮ ವಲಸಿಗರು ಎಂದು ಉಲ್ಲೇಖಿಸುವ ಪ್ರವೃತ್ತಿಯೂ ಇದೆ.

ಚುನಾವಣೆ ನಡೆಯಲಿರುವ ಅಸ್ಸಾಂ ರಾಜ್ಯದಲ್ಲಿ ಅಲ್ಪಸಂಖ್ಯಾತರ ಪ್ರಾಬಲ್ಯದ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ಚುನಾವಣಾ ಕಾರ್ಯತಂತ್ರವನ್ನು ವಿವರಿಸುತ್ತಾ ಗುವಾಹಟಿಯಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅವರು ಮಾ.5ರಂದು ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದರು. ರಾಷ್ಟ್ರವನ್ನು ಪ್ರೀತಿಸುವ ಹಾಗೂ ‘ಭಾರತ್ ಮಾತಾ ಕಿ ಜೈ’ ಅಥವಾ ‘ವಂದೇ ಮಾತರಂ’ ಎಂದು ಹಿಂಜರಿಕೆಯಿಲ್ಲದೆ ಹೇಳುವ ಯಾರೊಂದಿಗೂ ತಮ್ಮ ಪಕ್ಷವು ಸಹಜವಾಗಿ ಹೊಂದಿಕೊಳ್ಳುತ್ತದೆ ಎಂದು ಅವರು ಹೇಳಿದರು.

“ಮಿಯಾ ಜನರು ನಮ್ಮ ಶತ್ರುಗಳಲ್ಲ. ಆದರೆ ಲವ್ ಜಿಹಾದ್, ಭೂ ಅತಿಕ್ರಮಣ, ಬಾಲ್ಯವಿವಾಹ ಮತ್ತು ‘ರಸಗೊಬ್ಬರ ಜಿಹಾದ್’ ಎಂಬ ವಿಷಯಗಳ ಬಗ್ಗೆ ನಮಗೆ ವಿರೋಧವಿದೆ,” ಎಂದು ಶರ್ಮಾ ಹೇಳಿದರು.

ಸಮುದಾಯದ ಕೆಲ ರೈತರು ಸಾಮೂಹಿಕ ಬಳಕೆಗಾಗಿ ಬೆಳೆಯುವ ಆಹಾರ ಬೆಳೆಗಳ ಮೇಲೆ ರಾಸಾಯನಿಕಗಳನ್ನು ಬಳಸುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ‘ರಸಗೊಬ್ಬರ ಜಿಹಾದ್’ ಎಂಬ ಪದವನ್ನು ಬಳಸಲಾಗಿದೆ ಎಂದು ಅವರು ವಿವರಿಸಿದರು. ಈ ಸಮಸ್ಯೆಗಳು ಪರಿಹಾರವಾದರೆ ಬಿಜೆಪಿ ಸಮುದಾಯವನ್ನು ವಿರೋಧಿಗಳೆಂದು ಪರಿಗಣಿಸುವುದಿಲ್ಲ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರ ಪ್ರಾಬಲ್ಯದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಸ್ಪರ್ಧಿಸಲಿದೆ. ಗೆಲುವಿನ ಸಾಧ್ಯತೆಯನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆ ಧರ್ಮವನ್ನು ಆಧರಿಸಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಸ್ಪಷ್ಟಪಡಿಸಿದರು.

‘ಮಿಯಾ’ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಲಾಗಿದೆ ಹಾಗೂ ಸಾಂಕೇತಿಕ ಹಿಂಸಾಚಾರಕ್ಕೆ ಪ್ರೇರೇಪಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಹಲವು ಅರ್ಜಿಗಳನ್ನು ಫೆಬ್ರವರಿ 26ರಂದು ವಿಚಾರಣೆ ನಡೆಸಿದ ಗುವಾಹಟಿ ಹೈಕೋರ್ಟ್, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ನೋಟಿಸ್ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News