×
Ad

Tamil Nadu | ನೆರೆಹೊರೆಯವರ ಜಗಳ; ಕೋಪದಲ್ಲಿ ಬೀದಿ ನಾಯಿ ಮರಿಗಳನ್ನು ಗೋಡೆಗೆ ಎಸೆದು ಕೊಂದ ಮಹಿಳೆಯ ಬಂಧನ

Update: 2026-03-07 17:19 IST
Screengrab : X 

ತಿರುಚ್ಚಿ: ನೆರೆಮನೆಯಾಕೆ ತನ್ನ ಪುತ್ರನತ್ತ ಕಲ್ಲು ಎಸೆದಿದ್ದರಿಂದ ಕುಪಿತಗೊಂಡ ಮಹಿಳೆಯೊಬ್ಬರು ಆಕೆಯ ಮನೆಯ ಮುಂದಿದ್ದ ಬೀದಿ ನಾಯಿ ಮರಿಗಳನ್ನು ಗೋಡೆಗೆ ಎಸೆದು ಕೊಂದಿರುವ ಘಟನೆ ತಿರುಚ್ಚಿಯ ಕಂಬಾರಸಂಪೆಟ್ಟೈನಲ್ಲಿ ನಡೆದಿದೆ. ಬೀದಿ ನಾಯಿ ಮರಿಗಳನ್ನು ನೆರೆಯಮನೆಯಾಕೆ ಸಾಕುತ್ತಿದ್ದಾಳೆ ಎಂಬ ತಪ್ಪು ಗ್ರಹಿಕೆಯಿಂದ ಆಕೆ ಇಂತಹ ಕೃತ್ಯವೆಸಗಿದ್ದು, ಈ ಸಂಬಂಧ ಆಕೆಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಇದರೊಂದಿಗೆ ಮೂರು ವರ್ಷದ ಬಾಲಕನ ಮೇಲೆ ಕಲ್ಲು ಎಸೆದ ಆರೋಪದ ಮೇಲೆ ಮಹಿಳೆಯ ನೆರೆಮನೆಯಾಕೆಯನ್ನೂ ಪೊಲೀಸರು ಬಂಧಿಸಿದ್ದಾರೆ.

ಜೆ. ಮೀನಾಕ್ಷಿ ಮಿಶ್ರಾ ಹಾಗೂ ಜಿ. ಭುವನೇಶ್ವರಿ (30) ಇಬ್ಬರೂ ನೆರೆಹೊರೆಯವರಾಗಿದ್ದು, ಕಳೆದ ಒಂದು ವರ್ಷದಿಂದ ಅವರಿಬ್ಬರೂ ಕೌಟುಂಬಿಕ ವಿಷಯದ ಕಾರಣಕ್ಕೆ ಜಗಳವಾಡುತ್ತಿದ್ದರು. ಬುಧವಾರ ಬೆಳಗ್ಗೆ ಸುಮಾರು 6 ಗಂಟೆಗೆ ಇಬ್ಬರು ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಭುವನೇಶ್ವರಿಯು ಮೀನಾಕ್ಷಿ ಮಿಶ್ರಾಳ ಪುತ್ರನೆಡೆಗೆ ಕಲ್ಲು ತೂರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣವೇ ಮೀನಾಕ್ಷಿ ತಮ್ಮ ಪುತ್ರನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮನೆಗೆ ಮರಳಿದ ಸುಮಾರು ಮೂರು ಗಂಟೆಯ ಬಳಿಕ, ಭುವನೇಶ್ವರಿ ನಿವಾಸದ ಬಳಿ ಮೂರು ನಾಯಿ ಮರಿಗಳು ಅಡ್ಡಾಡುತ್ತಿರುವುದನ್ನು ಮೀನಾಕ್ಷಿ ಗಮನಿಸಿದ್ದಾಳೆ. ಆ ನಾಯಿ ಮರಿಗಳ ಆರೈಕೆಯನ್ನು ಭುವನೇಶ್ವರಿ ಮಾಡುತ್ತಿದ್ದಾಳೆ ಎಂದು ತಪ್ಪಾಗಿ ಗ್ರಹಿಸಿದ ಮೀನಾಕ್ಷಿ, ಕೋಪದಿಂದ ಆ ಮೂರು ನಾಯಿ ಮರಿಗಳ ಪೈಕಿ ಎರಡು ನಾಯಿ ಮರಿಗಳನ್ನು ಎತ್ತಿಕೊಂಡು, ಭುವನೇಶ್ವರಿ ನಿವಾಸದ ಗೋಡೆಗೆ ಬಲವಾಗಿ ಎಸೆದಿದ್ದಾಳೆ. ಆ ನಾಯಿ ಮರಿಗಳು ಎಸೆತದ ತೀವ್ರತೆಗೆ ತಕ್ಷಣವೇ ಮೃತಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪೀಪಲ್ ಫಾರ್ ಅನಿಮಲ್ ಸಂಘಟನೆಯ ಉಪಾಧ್ಯಕ್ಷ ಅಜಯ್ ಭರತ್ ನೀಡಿದ ದೂರನ್ನು ಆಧರಿಸಿ, ಮೀನಾಕ್ಷಿ ಮಿಶ್ರಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಜೀಯಪುರಂ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಬೆನ್ನಿಗೇ, ತಮ್ಮ ಪುತ್ರನಿಗೆ ಕಲ್ಲಿನಲ್ಲಿ ಹೊಡೆಯಲಾಗಿದೆ ಎಂದು ಆರೋಪಿಸಿ ಮೀನಾಕ್ಷಿ ಮಿಶ್ರಾಳ ಪತಿ ಜೈ ಗಣೇಶ್ ನೀಡಿದ ದೂರನ್ನು ಆಧರಿಸಿ ಭುವನೇಶ್ವರಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News