×
Ad

ಭಾರತೀಯರು ಒಳ್ಳೆಯ ಮಿತ್ರರು; ನಾವು ಹೇಳಿದ ಹಾಗೆ ಕೇಳುತ್ತಾರೆ: ಅಮೆರಿಕದ ಹಣಕಾಸು ಕಾರ್ಯದರ್ಶಿ

► ʼರಷ್ಯಾ ತೈಲ ಖರೀದಿಗೆ ಭಾರತಕ್ಕೆ 30 ದಿನಗಳ ವಿನಾಯಿತಿʼ ► "56 ಇಂಚಿನ ಎದೆ ಎಷ್ಟು ರಾಜಿ ಮಾಡಿಕೊಂಡಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ?”: ಕಾಂಗ್ರೆಸ್ ಟೀಕೆ

Update: 2026-03-07 15:48 IST

ಸ್ಕಾಟ್ ಬೆಸೆಂಟ್ | Photo Credit ; X 

ಹೊಸದಿಲ್ಲಿ: ರಷ್ಯಾದ ತೈಲದ ಮೇಲಿನ ಅಮೆರಿಕದ ನಿರ್ಬಂಧಗಳ ನಡುವೆಯೂ ಈಗಾಗಲೇ ಸಮುದ್ರದಲ್ಲಿ ಸಾಗಣೆಯಲ್ಲಿರುವ ತೈಲವನ್ನು ಭಾರತ ಖರೀದಿಸಲು 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ. ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾದ ತಾತ್ಕಾಲಿಕ ಕೊರತೆಯನ್ನು ನಿಭಾಯಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಬೆಸೆಂಟ್, ಅಮೆರಿಕದ ‘ಅಮೆರಿಕನ್ ಇಂಧನ ಪ್ರಾಬಲ್ಯ’ ನೀತಿಯ ಪರಿಣಾಮವಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪೂರೈಕೆ ಉತ್ತಮವಾಗಿಯೇ ಇದೆ ಎಂದು ಹೇಳಿದ್ದಾರೆ. ಆದರೆ ಅಲ್ಪಾವಧಿಯ ಪೂರೈಕೆ ಒತ್ತಡವನ್ನು ಕಡಿಮೆ ಮಾಡಲು ಭಾರತಕ್ಕೆ ಸೀಮಿತ ವಿನಾಯಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

“ಭಾರತ ಜವಾಬ್ದಾರಿಯುತವಾಗಿ ವರ್ತಿಸಿದೆ. ಭಾರತೀಯರು ಒಳ್ಳೆಯ ಮಿತ್ರರು. ನಾವು ಹೇಳಿದ ಹಾಗೆ ಕೇಳುತ್ತಾರೆ. ಈಗಾಗಲೇ ಮಂಜೂರಾದ ರಷ್ಯಾದ ತೈಲವನ್ನು ಖರೀದಿಸುವುದನ್ನು ಭಾರತ ಹಿಂದಿನಿಂದಲೇ ನಿಲ್ಲಿಸಿದೆ. ಈ ತಾತ್ಕಾಲಿಕ ಅನುಮತಿ ಈಗಾಗಲೇ ಹಡಗುಗಳಲ್ಲಿ ಸಾಗಣೆಯಲ್ಲಿರುವ ಹಾಗೂ ಸಮುದ್ರದಲ್ಲಿ ಸಿಲುಕಿರುವ ರಷ್ಯಾದ ತೈಲ ಸರಕುಗಳಿಗೆ ಮಾತ್ರ ಅನ್ವಯಿಸುತ್ತದೆ. ಹೊಸ ತೈಲ ವಹಿವಾಟುಗಳಿಗೆ ಇದು ಅನ್ವಯಿಸುವುದಿಲ್ಲ. ಈ ಉದ್ದೇಶಪೂರ್ವಕ ಅಲ್ಪಾವಧಿಯ ಕ್ರಮವು ರಷ್ಯಾ ಸರ್ಕಾರಕ್ಕೆ ಗಮನಾರ್ಹ ಆರ್ಥಿಕ ಪ್ರಯೋಜನ ನೀಡುವುದಿಲ್ಲ” ಎಂದು ಬೆಸೆಂಟ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಭಾರತಕ್ಕೆ ನೀಡಿರುವ ವಿನಾಯಿತಿಯ ಪ್ರಕಾರ, ಮಾರ್ಚ್ 5ರಿಂದ ಎಪ್ರಿಲ್ 4, 2026ರವರೆಗೆ 30 ದಿನಗಳ ಅವಧಿಗೆ ರಷ್ಯಾದ ತೈಲವನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಮಾರ್ಚ್ 5ರೊಳಗೆ ಹಡಗುಗಳಿಗೆ ಲೋಡ್ ಮಾಡಲಾದ ತೈಲಕ್ಕೆ ಮಾತ್ರ ಈ ಅನುಮತಿ ಅನ್ವಯಿಸುತ್ತದೆ.

ಪಾವತಿ ಸಮಸ್ಯೆಗಳ ಕಾರಣದಿಂದ ಹಡಗುಗಳಲ್ಲೇ ಸಿಲುಕಿರುವ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಲು ಅವಕಾಶ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ಸಂಬಂಧಿತ ಉದ್ವಿಗ್ನತೆಗಳಿಂದ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ನಿರ್ಬಂಧಗಳು ಜಾಗತಿಕ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಾಗಣೆಯಲ್ಲಿರುವ ತೈಲವನ್ನು ಸಂಸ್ಕರಣಾಗಾರಗಳಿಗೆ ತಲುಪಿಸಿ ಮಾರುಕಟ್ಟೆಗೆ ತ್ವರಿತವಾಗಿ ತಲುಪಿಸುವ ಮೂಲಕ ಬೆಲೆ ಏರಿಕೆಯನ್ನು ತಡೆಯುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಕೂಡ ಈ ವಿಷಯದ ಕುರಿತು ಪ್ರತಿಕ್ರಿಯಿಸಿ, “ಈ ತೈಲವನ್ನು ಖರೀದಿಸಿ ಸಂಸ್ಕರಣಾಗಾರಗಳಿಗೆ ತಲುಪಿಸಿದರೆ ಜಾಗತಿಕ ಮಾರುಕಟ್ಟೆಯಲ್ಲಿ ಇತರ ಸಂಸ್ಕರಣಾಗಾರಗಳ ಮೇಲೆ ಇರುವ ಒತ್ತಡ ಕಡಿಮೆಯಾಗುತ್ತದೆ,” ಎಂದು ಹೇಳಿದ್ದಾರೆ.

ಈ ವಿನಾಯಿತಿ ನೀಡಿರುವುದರಿಂದ ರಷ್ಯಾ ಕುರಿತು ಅಮೆರಿಕದ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಹೊಸ ತೈಲ ಉತ್ಪಾದನೆ ಅಥವಾ ಹೊಸ ವಹಿವಾಟುಗಳಿಗೆ ಈ ಮನ್ನಾ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

ಭಾರತದ ರಷ್ಯಾದ ತೈಲ ಖರೀದಿಯ ಕುರಿತು ಅಮೆರಿಕ ಅಧಿಕಾರಿಗಳ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರವನ್ನು ಟೀಕಿಸಿದೆ. ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇದು ಮೋದಿ ಸರ್ಕಾರದ “ಹೇಡಿತನ ಮತ್ತು ರಾಜಿ”ಯನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

“ಸ್ವಯಂ ಘೋಷಿತ 56 ಇಂಚಿನ ಎದೆ ಎಷ್ಟು ರಾಜಿ ಮಾಡಿಕೊಂಡಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ?” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಭಾರತವು ರಷ್ಯಾದ ತೈಲ ಖರೀದಿಸಲು ಯಾವುದೇ ರಾಷ್ಟ್ರದ ಅನುಮತಿಯನ್ನು ಅವಲಂಬಿಸಿಲ್ಲ ಎಂದು ಹೇಳಿದ್ದಾರೆ. ಅಮೆರಿಕದ ವಿನಾಯಿತಿ ಕೇವಲ ವಹಿವಾಟಿನ ತಾಂತ್ರಿಕ ಅಡಚಣೆಗಳನ್ನು ಕಡಿಮೆ ಮಾಡುವ ಕ್ರಮವಾಗಿದ್ದು, ಭಾರತದ ಇಂಧನ ನೀತಿಯನ್ನು ನಿರ್ಧರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಈ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಾರ್ಯತಂತ್ರದ ತೈಲ ರಾಜತಾಂತ್ರಿಕತೆಯ ಯಶಸ್ಸು ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News