Kerala | ಪ್ರಧಾನಿ ಮೋದಿಯನ್ನು ‘ದೇಶದ್ರೋಹಿ’ ಎಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ನರೇಂದ್ರ ಮೋದಿ | Photo Credit : PTI
ಕಣ್ಣೂರು: ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ʼದೇಶದ್ರೋಹಿʼ ಎಂದು ನಿಂದಿಸಿದ ವ್ಯಕ್ತಿಯೊಬ್ಬನ ವಿರುದ್ಧ ಕೇರಳದ ಕಣ್ಣೂರಿನ ಶ್ರೀಕಂದಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಕೊಟ್ಟೂರಿನ ನಿವಾಸಿಯಾದ ರಾಜನ್ ಸಿ. ಕೊಟ್ಟೂರ್ ಎಂದು ಗುರುತಿಸಲಾಗಿದ್ದು, ಬಿಜೆಪಿ ಕಾರ್ಯಕರ್ತರೊಬ್ಬರು ನೀಡಿದ ದೂರನ್ನು ಆಧರಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ಐಆರ್ ಪ್ರಕಾರ, ಆರೋಪಿ ರಾಜನ್ ಮಾರ್ಚ್ 3ರಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ‘ದೇಶದ್ರೋಹಿ’ ಎಂದು ನಿಂದಿಸಿದ್ದ ಎಂದು ಆರೋಪಿಸಲಾಗಿದೆ.
ಆರೋಪಿ ರಾಜನ್ ಪ್ರಧಾನಿ ನರೇಂದ್ರ ಮೋದಿಯ ಹೆಸರಿಗೆ ಕಳಂಕ ತಂದಿದ್ದು, ಗಲಭೆ ಸೃಷ್ಟಿಸುವ ದುರುದ್ದೇಶದಿಂದ ಪ್ರಚೋದನಾಕಾರಿ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಭಾರತೀಯ ವಿವಿಧ ಸೆಕ್ಷನ್ ಗಳಡಿ ಆರೋಪಿ ರಾಜನ್ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರು ಸ್ವೀಕರಿಸಿದ ಬಳಿಕ, ಶುಕ್ರವಾರ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.