×
Ad

ಸರ್ಕಾರವನ್ನು ಟೀಕಿಸುವ ಪ್ರಾಧ್ಯಾಪಕರ ವಿರುದ್ಧ ಅಸ್ಸಾಂ ಸರ್ಕಾರ ಕಾನೂನು ತರಲಿದೆ: ಹಿಮಂತ ಬಿಸ್ವ ಶರ್ಮ

Update: 2024-01-22 13:49 IST

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (PTI)

ಗುವಾಹಟಿ: ಸರ್ಕಾರವನ್ನು ಟೀಕಿಸುವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ವಿರುದ್ಧ ಅಸ್ಸಾಂ ಸರ್ಕಾರವು ಕಾನೂನನ್ನು ತರಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಗುವಾಹಟಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ನಾವು ಅವರಿಗೆ ವೇತನವನ್ನು ನೀಡುತ್ತೇವೆ. ಅವರು ಕೆಲವು ನೀತಿ ಸಂಹಿತೆಗಳಡಿ ಕೆಲಸ ಮಾಡಬೇಕಾಗುತ್ತದೆ. ತಮಗೆ ಬೇಕಾದಾಗಲೆಲ್ಲ ಅವರು ಸರ್ಕಾರದ ವಿರುದ್ಧ ಅವಹೇಳನಾಕಾರಿ ಪದಗಳನ್ನು ಬಳಸಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದ್ದಾರೆ.

ವಿಶ‍್ವವಿದ್ಯಾಲಯಗಳ ಪ್ರಾಧ‍್ಯಾಪಕರನ್ನು ನಾಗರಿಕ ಸೇವಾ ನಿಯಮಗಳಡಿ ತರಲು ಸರ್ಕಾರ ಉದ್ದೇಶಿಸಿದೆ. ನಾವು ಶೀಘ್ರವೇ ಈ ಸಂಬಂಧ ಮಸೂದೆಯೊಂದನ್ನು ಅಸ್ಸಾಂ ವಿಧಾನಸಭೆಯಲ್ಲಿ ಮಂಡಿಸಲಿದ್ದೇವೆ ಎಂದು ಶರ್ಮ ಹೇಳಿದ್ದಾರೆ.

ಪ್ರಾಧ‍್ಯಾಪಕರನ್ನು ವಿಶ್ವವಿದ್ಯಾಲಯ ಅನುದಾನ ಆಯೋಗವು ನೇಮಕ ಮಾಡುತ್ತದೆಯಾದರೂ, ಅವರಿಗೆ ವೇತನ ನೀಡುವುದು ರಾಜ್ಯ ಸರ್ಕಾರ. ಆದರೆ, ಕೆಲವು ಪ್ರಾಧ್ಯಾಪಕರು ತಮ್ಮ ತರಗತಿಗಳಲ್ಲಿ ಕಂಡು ಬರುವುದಕ್ಕಿಂತ ಟಿವಿ ವಾಹಿನಿಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಾರೆ” ಎಂದೂ ಅವರು ಟೀಕಿಸಿದ್ದಾರೆ.

“ವಿದ್ಯಾರ್ಥಿಗಳಿಗೆ ಇನ್ನೂ ಉತ್ತಮವಾಗಿ ಬೋಧಿಸಲೆಂದು ವಿಶ್ವವಿದ್ಯಾಲಯ ಅನುದಾನ ಆಯೋಗವು ಅವರಿಗೆ ಅಧ್ಯಯನ ಮಾಡಲು ಸಂಜೆ ವೇಳೆ ಸಮಯಾವಕಾಶ ನೀಡುತ್ತದೆ. ಆದರೆ, ಈ ಪೈಕಿ ಬಹುತೇಕರು ಸರ್ಕಾರದ ವಿರುದ್ಧ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ನಾವು ಅವರಿಗೆ ವೇತನ ನೀಡಬೇಕಿದ್ದರೆ, ನಾವು ಕೆಲವು ಶಿಸ್ತನ್ನು ನಿರೀಕ್ಷಿಸುತ್ತೇವೆ” ಎಂದು ಶರ್ಮ ಹೇಳಿದ್ದಾರೆ.

“ಈ ವಿಷಯವನ್ನು ಇನ್ನು ಒಂದು ವರ್ಷದೊಳಗೆ ಬಗೆಹರಿಸಲು ನಾವು ಯೋಜಿಸಿದ್ದೇವೆ. ನಾನು ಎಲ್ಲಿಯವರೆಗೆ ಮುಖ್ಯಮಂತ್ರಿ ಆಗಿರುತ್ತೇನೊ ಅಲ್ಲಿಯವರೆಗೂ ನಾನು ಇದಕ್ಕೆ ಅವಕಾಶ ನೀಡುವುದಿಲ್ಲ. ನಾವು ಮಸೂದೆಯೊಂದನ್ನು ಮಂಡಿಸಿ, ಇದನ್ನು ಕಾನೂನಿನ ಮೂಲಕ ನಿಯಂತ್ರಿಸುತ್ತೇವೆ” ಎಂದೂ ಅವರು ತಿಳಿಸಿದ್ದಾರೆ.

ಒಂದು ವೇಳೆ ಸರ್ಕಾರ ಹಾಗೂ ಮುಖ್ಯಮಂತ್ರಿಯನ್ನು ಟೀಕಿಸಲು ಪ್ರಾಧ‍್ಯಾಪಕರು ಅಥವಾ ಉಪ ಕುಲಪತಿಗಳೂ ಅಪೇಕ್ಷಿಸಿದರೆ, ಅವರು ತಮ್ಮ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಲು ಸ್ವತಂತ್ರರಾಗಿದ್ದಾರೆ ಎಂದು ಅವರು ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News