×
Ad

ಮುರ್ಷಿದಾಬಾದ್ ನಲ್ಲಿ ‘ಬಾಬರಿ ಮಸೀದಿ’ ಪ್ರಸ್ತಾಪ ವಿವಾದ: ಶಾಸಕ ಹುಮಾಯೂನ್ ಕಬೀರ್ ಟಿಎಂಸಿಯಿಂದ ಅಮಾನತು

Update: 2025-12-04 15:50 IST

PC: freepressjournal

ಕೋಲ್ಕತ್ತಾ: ಮುರ್ಷಿದಾಬಾದ್ ಜಿಲ್ಲೆಯಲ್ಲಿ ‘ಬಾಬರಿ ಮಸೀದಿ’ ನಿರ್ಮಾಣದ ಪ್ರಸ್ತಾಪ ಮಾಡಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಭರತ್‌ಪುರ ಶಾಸಕ ಹುಮಾಯೂನ್ ಕಬೀರ್ ಅವರನ್ನು ತೃಣಮೂಲ ಕಾಂಗ್ರೆಸ್ ಗುರುವಾರ ಅಮಾನತುಗೊಳಿಸಿದೆ.

ಪಕ್ಷದ ಆಂತರಿಕ ವಿಚಾರಗಳಿಂದ ಹಿಡಿದು ಹಲವಾರು ವಿಚಾರಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಕಬೀರ್, ಡಿಸೆಂಬರ್ 6ರಂದು ಬೆಲ್ದಂಗಾದಲ್ಲಿ ಬಾಬರಿ ಮಸೀದಿಯ ಅಡಿಪಾಯ ಹಾಕಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು.

ಅಮಾನತು ಆದೇಶ ಪ್ರಕಟಿಸಿದ ಸಚಿವ ಫಿರ್ಹಾದ್ ಹಕೀಮ್, “ರಾಜ್ಯದಲ್ಲಿ ಶಾಂತಿ ಮತ್ತು ಕೋಮು ಸಾಮರಸ್ಯ ಕಾಪಾಡುವ ಕೆಲಸಕ್ಕೆ ಟಿಎಂಸಿ ಬದ್ಧವಾಗಿದೆ. ಈ ಸಂದರ್ಭದಲ್ಲಿ ಕಬೀರ್ ಅವರ ನಡೆ ಸರಿಯಲ್ಲ. ಕೋಮು ರಾಜಕೀಯಕ್ಕೆ ತೊಡಕು ಒಡ್ಡುವ ಪ್ರಯತ್ನವನ್ನು ಪಕ್ಷ ಯಾವ ರೀತಿಯಲ್ಲೂ ಒಪ್ಪುವುದಿಲ್ಲ,” ಎಂದು ಹೇಳಿದರು.

“ಪಕ್ಷದ ಉನ್ನತ ನಾಯಕತ್ವದ ಸೂಚನೆಯ ಮೇರೆಗೆ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ,” ಎಂದು ಹಕೀಮ್ ಸ್ಪಷ್ಟಪಡಿಸಿದರು.

ಅಮಾನತಿಗೆ ಪ್ರತಿಕ್ರಿಯೆ ನೀಡಿದ ಕಬೀರ್, ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ರಾಜಕೀಯ ಪಕ್ಷ ರಚಿಸುವುದಾಗಿ ಹೇಳಿದರು. ಡಿಸೆಂಬರ್ 6ರ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸುವ ಸಾಧ್ಯತೆ ಇದ್ದು, ಇದರಿಂದ ಕೋಲ್ಕತ್ತಾ–ಸಿಲಿಗುರಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ NH-12 ಅಸ್ತವ್ಯಸ್ತವಾಗಬಹುದು ಎಂದು ಅವರು ಮತ್ತೆ ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News