ಸಹೋದ್ಯೋಗಿಗಳು, ವಿದ್ಯಾರ್ಥಿಗಳಿಂದ ಬನಾರಸ್ ಹಿಂದೂ ವಿವಿಯ ದಲಿತ ಪ್ರಾಧ್ಯಾಪಕಿಗೆ ಹಲ್ಲೆ, ಕಿರುಕುಳ; ಆರೋಪ
Banaras Hindu University : PTI
ವಾರಾಣಸಿ (ಉತ್ತರ ಪ್ರದೇಶ): ಬನಾರಸ್ ಹಿಂದೂ ವಿಶ‍್ವವಿದ್ಯಾಲಯದ ಸಹಾಯಕಿ ಪ್ರಾಧ‍್ಯಾಪಕಿಯೊಬ್ಬರು ಇಬ್ಬರು ಸಹೋದ್ಯೋಗಿಗಳು ಹಾಗೂ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಹಲ್ಲೆ, ಕಿರುಕುಳದ ಆರೋಪ ಮಾಡಿದ್ದಾರೆ ಎಂದು ಗುರುವಾರ The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುಮಾರು ಮೂರು ತಿಂಗಳ ಹಿಂದೆ ನಡೆದಿತ್ತು ಎಂದು ಆರೋಪಿಸಲಾಗಿರುವ ಘಟನೆಗೆ ಸಂಬಂಧಿಸಿದಂತೆ ಪ್ರಾಧ‍್ಯಾಪಕಿಯು ನೀಡಿದ ದೂರನ್ನು ಆಧರಿಸಿ ಆಗಸ್ಟ್ 27ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ತಾನು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಆಯೋಗ ಹಾಗೂ ಮುಖ್ಯಮಂತ್ರಿಗಳ ಕಚೇರಿಗೆ ಪತ್ರ ಬರೆದ ನಂತರವಷ್ಟೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ದೂರುದಾರ ಪ್ರಾಧ್ಯಾಪಕಿಯು ಆರೋಪಿಸಿದ್ದಾರೆ.
ಆರೋಪಿಗಳ ಒತ್ತಡದ ಹೊರತಾಗಿಯೂ ನಾನು ಓರ್ವ ವ್ಯಕ್ತಿಯನ್ನು ಆತನ ಹುದ್ದೆಯಿಂದ ತೆಗೆಯಲು ನಿರಾಕರಿಸಿದ್ದರಿಂದ ಈ ಗಲಾಟೆ ಶುರುವಾಯಿತು. ನಾನು ದಲಿತಳಾಗಿರುವುದಿಂದ ಆರೋಪಿಗಳು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ದೂರದಾರ ಪ್ರಾಧ್ಯಾಪಕಿಯು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಹಾಯಕ ಪೊಲೀಸ್ ಆಯುಕ್ತ ಪ್ರವೀಣ್ ಕುಮಾರ್ ಸಿಂಗ್, ಪೊಲೀಸರು ಅಪರಾಧ ಪ್ರಕ್ರಿಯಾ ಸಂಹಿತೆಯಡಿ ಪ್ರಾಥಮಿಕ ತನಿಖೆ ನಡೆಸಿದ ನಂತರ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 323 (ಸ್ವಯಂಪ್ರೇರಿತ ಹಲ್ಲೆ), 342 (ಅಕ್ರಮ ಬಂಧನ), 354-ಬಿ (ಬಟ್ಟೆ ಕಳಚುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲತ್ಕಾರ), 504 (ಶಾಂತಿಭಂಗಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಹಲ್ಲೆ) ಹಾಗೂ 506 (ಕ್ರಿಮಿನಲ್ ಬೆದರಿಕೆ) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆದರೆ, ದೂರುದಾರ ಪ್ರಾಧ್ಯಾಪಕಿಯ ಆರೋಪವನ್ನು ಅಲ್ಲಗಳೆದಿರುವ ಓರ್ವ ಆರೋಪಿಯು, ಆಕೆಯ ಆರೋಪಗಳು ಆಧಾರರಹಿತವಾಗಿದ್ದು, ಆಕೆ ಈ ಹಿಂದೆಯೂ ಇದೇ ಬಗೆಯ ದೂರುಗಳನ್ನು ಇತರರ ವಿರುದ್ಧವೂ ದಾಖಲಿಸಿದ್ದರು. ಈ ದೂರಿನ ಹಿಂದೆ ಆಕೆಯ ವೈಯಕ್ತಿಕ ದುರುದ್ದೇಶ ಅಡಗಿರುವುದರಿಂದಲೇ ಆಕೆ ಹೀಗೆ ಮಾಡಿದ್ದಾರೆ. ಒಂದು ವೇಳೆ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳುವ ಮುನ್ನವೇ ಸೂಕ್ತ ತನಿಖೆ ನಡೆಸಿದ್ದರೆ, ಈ ಸಂಗತಿಯು ಈ ಹಂತಕ್ಕೆ ತಲುಪುತ್ತಿರಲಿಲ್ಲ” ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.