ಗಡಿಪಾರು ಕಾನೂನುಬಾಹಿರ, ಒಂದು ತಿಂಗಳಲ್ಲಿ ಬಾಂಗ್ಲಾದೇಶದಿಂದ ಕುಟುಂಬಗಳನ್ನು ವಾಪಸ್ ತನ್ನಿ : ಕೇಂದ್ರಕ್ಕೆ ಕೋಲ್ಕತಾ ಹೈಕೋರ್ಟ್ ಆದೇಶ
ಸಾಂದರ್ಭಿಕ ಚಿತ್ರ | PTI
ಕೋಲ್ಕತಾ,ಸೆ.26: ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯಿಂದ ಇಬ್ಬರು ಮಹಿಳೆಯರು ಮತ್ತು ಅವರ ಕುಟುಂಬಗಳನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ ಕೇಂದ್ರ ಸರಕಾರದ ನಿರ್ಧಾರವನ್ನು ಕೋಲ್ಕತಾ ಉಚ್ಚ ನ್ಯಾಯಾಲಯ ಶುಕ್ರವಾರ ರದ್ದುಗೊಳಿಸಿದೆ.
ಗಡಿಪಾರು ಕ್ರಮ ಕಾನೂನುಬಾಹಿರವಾಗಿತ್ತು ಎಂದು ಹೇಳಿದ ನ್ಯಾಯಾಲಯ, ಮೂವರು ಮಕ್ಕಳು ಸೇರಿದಂತೆ ಎಲ್ಲ ಆರು ಜನರನ್ನು ಒಂದು ತಿಂಗಳಲ್ಲಿ ಭಾರತಕ್ಕೆ ಮರಳಿ ಕರೆತರುವಂತೆ ಆದೇಶಿಸಿದೆ. ಆದೇಶಕ್ಕೆ ತಾತ್ಕಾಲಿಕ ತಡೆಯನ್ನು ನೀಡುವಂತೆ ಕೇಂದ್ರದ ಮನವಿಯನ್ನೂ ವಜಾಗೊಳಿಸಿತು.
ಬೀರ್‌ಭೂಮ್‌ನ ಮುರಾರಾಯ್‌ನ ಪೈಕಾರ ನಿವಾಸಿಗಳಾದ ಸೋನಾಲಿ ಬೀಬಿ ಮತ್ತು ಸ್ವೀಟಿ ಬೀಬಿ ಅವರ ಕುಟುಂಬ ಸದಸ್ಯರು ಉಚ್ಚ ನ್ಯಾಯಾಲಯದಲ್ಲಿ ಗಡಿಪಾರು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿದ್ದರು.
ತಮ್ಮ ಗಂಡಂದಿರು ಮತ್ತು ಮಕ್ಕಳು ಕಳೆದ 20 ವರ್ಷಗಳಿಂದಲೂ ದಿಲ್ಲಿಯಲ್ಲಿ ವಾಸವಿದ್ದು, ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಈ ಮಹಿಳೆಯರು ತಿಳಿಸಿದ್ದರು. ಜೂ.18ರಂದು ದಿಲ್ಲಿ ಪೋಲಿಸರು ಬಾಂಗ್ಲಾದೇಶಿ ಪ್ರಜೆಗಳೆಂಬ ಶಂಕೆಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಒಂಭತ್ತು ದಿನಗಳ ಬಳಿಕ ಜೂ.27ರಂದು ಅವರನ್ನು ಗಡಿಯಾಚೆಗೆ ತಳ್ಳಲಾಗಿತ್ತು. ವರದಿಗಳ ಪ್ರಕಾರ ಅವರನ್ನು ಬಾಂಗ್ಲಾದೇಶ ಪೋಲಿಸರು ಬಂಧಿಸಿದ್ದಾರೆ.
ಸೋನಾಲಿ ಗಡಿಪಾರುಗೊಂಡಾಗ ಒಂಭತ್ತು ತಿಂಗಳ ಗರ್ಭಿಣಿಯಾಗಿದ್ದಳು ಎಂದು ನ್ಯಾಯಾಲಯಕ್ಕೆ ತಿಳಿಸಿದ ಆಕೆಯ ಕುಟುಂಬವು ಮಗು ಬಾಂಗ್ಲಾದೇಶದಲ್ಲಿ ಜನಿಸಿದರೆ ಅದರ ಪೌರತ್ವದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದರು.
ಭೂ ದಾಖಲೆಗಳು, ತಮ್ಮ ಹೆತ್ತವರು ಮತ್ತು ಅಜ್ಜ-ಅಜ್ಜಿಯ ಮತದಾರರ ಗುರುತಿನ ಚೀಟಿಗಳು, ಸರಕಾರಿ ಆಸ್ಪತ್ರೆಗಳು ನೀಡಿದ್ದ ತಮ್ಮ ಮಕ್ಕಳ ಜನನ ಪ್ರಮಾಣಪತ್ರಗಳು ಸೇರಿದಂತೆ ಸೂಕ್ತ ದಾಖಲೆಗಳನ್ನು ತೋರಿಸಿದ್ದರೂ ಅವರನ್ನು ಗಡಿಪಾರು ಮಾಡಲಾಗಿದೆ ಎಂದು ಕುಟುಂಬಗಳ ಪರ ವಕೀಲರು ವಾದಿಸಿದ್ದರು.
ದಿಲ್ಲಿ ಹೈಕೋರ್ಟ್‌ನಲ್ಲಿ ಈಗಾಗಲೇ ಅರ್ಜಿಗಳು ಸಲ್ಲಿಕೆಯಾಗಿರುವುದರಿಂದ ಕೋಲ್ಕತಾ ಉಚ್ಚ ನ್ಯಾಯಾಲಯದ ಮುಂದಿರುವ ಅರ್ಜಿಗಳು ಮಾನ್ಯವಲ್ಲ ಎಂದು ತನ್ನ ಅಫಿಡವಿಟ್‌ನಲ್ಲಿ ಹೇಳಿದ ಕೇಂದ್ರವು, ದಿಲ್ಲಿ ಪೋಲಿಸರು ಬಾಂಗ್ಲಾದೇಶ ಅಥವಾ ಮ್ಯಾನ್ಮಾರ್ ಪ್ರಜೆಗಳ ಗಡಿಪಾರು ಕಾರ್ಯವಿಧಾನವನ್ನು ವಿವರಿಸಿ ಕೇಂದ್ರ ಗೃಹಸಚಿವಾಲಯವು ಮೇ 2025ರಲ್ಲಿ ಹೊರಡಿಸಿದ್ದ ಸೂಚನೆಗಳಡಿ ಕಾರ್ಯಾಚರಿಸಿದ್ದರು ಎಂದೂ ವಾದಿಸಿತ್ತು.
ತೀರ್ಪಿನ ಬಳಿಕ ಟಿಎಂಸಿ ಸಂಸದ ಸಮೀರುಲ್ ಇಸ್ಲಾಮ್ ಅವರು ನ್ಯಾಯಾಲಯದ ಆದೇಶವು ಬಡ ಬಂಗಾಳಿ ಕುಟುಂಬಗಳನ್ನು ಅಕ್ರಮ ವಲಸಿಗರೆಂದು ತಪ್ಪಾಗಿ ಬಿಂಬಿಸುವ ಬಿಜೆಪಿಯ ಪ್ರಯತ್ನವನ್ನು ಬಯಲಿಗೆಳೆದಿದೆ ಎಂದು ಹೇಳಿದರು. ಅದನ್ನು ‘ಬಂಗಾಳದ ವಿಜಯ’ ಎಂದು ಬಣ್ಣಿಸಿದ ಅವರು, ಗಡಿಪಾರು ಕ್ರಮವು ಬಂಗಾಳಿ ವಿರೋಧಿ, ಬಡವರ ವಿರೋಧಿ ಅಜೆಂಡಾದ ಭಾಗವಾಗಿತ್ತು ಎಂದರು.