ಗಡಿದಾಟಿ ಬಂದ ಬಾಂಗ್ಲಾಪ್ರಜೆಗಳು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದರು: ಭಾರತ ವಿದೇಶಾಂಗ ಸಚಿವಾಲಯ
ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ,ಅ.17: ತ್ರಿಪುರಾದಲ್ಲಿ ಮೂವರು ಅಮಾಯಕ ಬಾಂಗ್ಲಾ ಪ್ರಜೆಗಳು ಗುಂಪು ದಾಳಿಯಿಂದ ಸಾವಿಗೀಡಾಗಿದ್ದಾರೆಂಬ ಬಾಂಗ್ಲಾ ಸರಕಾರದ ಹೇಳಿಕೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಬಲವಾಗಿ ತಳ್ಳಿಹಾಕಿದೆ.
ಮೃತಪಟ್ಟ ಬಾಂಗ್ಲಾ ಪ್ರಜೆಗಳು ದನಕಳ್ಳಸಾಗಣೆದಾರರಾಗಿದ್ದು ಅಕ್ರಮವಾಗಿ ಗಡಿ ದಾಟಿ ಬಂದಿದ್ದರು. ದನಗಳನ್ನು ಕದಿಯಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರೊಂದಿಗೆ ನಡೆಸಿದ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆಂದು ಅದು ಹೇಳಿದೆ.
‘‘ ಬಾಂಗ್ಲಾದೇಶದಿಂದ ಮೂವರು ದುಷ್ಕರ್ಮಿಗಳ ಗುಂಪೊಂದು ಅಂತಾರಾಷ್ಟ್ರೀಯ ಗಡಿ ದಾಟಿ ಬಂದಿದ್ದು, ಭಾರತದ ಭೂಪ್ರದೇಶದಲ್ಲಿರುವ ಬಿದ್ಯಾಬಿಲ್ ಗ್ರಾಮದಲ್ಲಿ ದನಗಳನ್ನು ಕದಿಯಲು ಯತ್ನಿಸಿತ್ತು. ಈ ಸಂದರ್ಭ ಅವರು ಸ್ಥಳೀಯ ಗ್ರಾಮಸ್ಥರ ಮೇಲೆ ಕಬ್ಬಿಣದ ರಾಡ್ ಗಳು ಹಾಗೂ ಚೂರಿಗಳಿಂದ ಹಲ್ಲೆ ನಡೆಸಿದ್ದರು. ಆಗ ನಡೆದ ಘರ್ಷಣೆಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಘಟನೆಯ ಆನಂತರ ಚಂಪಾಹೊರ್‌ನ ಎಸ್‌ಡಿಪಿಓ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮೃತರ ರಾಷ್ಟ್ರೀಯತೆಯನ್ನು ದೃಢಪಡಿಸಲು ಗಡಿಭದ್ರತಾಪಡೆ (ಬಿಎಸ್‌ಎಫ್) ಹಾಗೂ ಬಾಂಗ್ಲಾದೇಶದ ಗಡಿ ಕಾವಲುದಳ (ಬಿಜಿಬಿ) ಎರಡು ಸುತ್ತಿನ ಧ್ವಜಸಭೆಗಳನ್ನು ನಡೆಸಿತು. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹಗಳನ್ನು ಬಾಂಗ್ಲಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.