Maharashtra | ಬಾರಾಮತಿ ವಿಮಾನ ಅಪಘಾತ: DGCA–ವಿಧಿವಿಜ್ಞಾನ ತಂಡಗಳಿಂದ ಸ್ಥಳ ಪರಿಶೀಲನೆ, ಬ್ಲ್ಯಾಕ್ ಬಾಕ್ಸ್ ಪತ್ತೆ
Photo credit: X/ANI
ಬಾರಾಮತಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ ವಿಮಾನ ಅಪಘಾತದ ತನಿಖೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಾಗೂ ವಿಧಿವಿಜ್ಞಾನ ತಂಡಗಳ ಅಧಿಕಾರಿಗಳು ಗುರುವಾರ ಬಾರಾಮತಿಯಲ್ಲಿ ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬುಧವಾರ ಅಜಿತ್ ಪವಾರ್ ಅವರು ಚುನಾವಣಾ ಪ್ರಚಾರಕ್ಕಾಗಿ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದ ವೇಳೆ ವಿಮಾನ ಪತನವಾಗಿತ್ತು.
ಅಪಘಾತಕ್ಕೆ ಸಂಬಂಧಿಸಿ ಪುಣೆ ಗ್ರಾಮೀಣ ಪೊಲೀಸರು ಬಾರಾಮತಿ ತಾಲೂಕು ಪೊಲೀಸ್ ಠಾಣೆಯಲ್ಲಿ ಅಪಘಾತದ ಸಾವು ವರದಿ (ಎಡಿಆರ್) ದಾಖಲಿಸಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. “ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಎಡಿಆರ್ ದಾಖಲಾಗಿದ್ದು, ಎಲ್ಲ ಆಯಾಮಗಳಿಂದ ತನಿಖೆ ಕೈಗೊಳ್ಳಲಾಗಿದೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ, ಅಪಘಾತಕ್ಕೀಡಾದ ಲಿಯರ್‌ಜೆಟ್–45 ವಿಮಾನದ ಬ್ಲಾಕ್ ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಕಪ್ಪು ಪೆಟ್ಟಿಗೆಯ ತಾಂತ್ರಿಕ ವಿಶ್ಲೇಷಣೆಯಿಂದ ಅಪಘಾತದ ನಿಖರ ಕಾರಣ ತಿಳಿಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಅಪಘಾತದಲ್ಲಿ ಪತನವಾದ ಬೊಂಬಾರ್ಡಿಯರ್ ಲಿಯರ್‌ಜೆಟ್–45 (ಎಲ್‌ಜೆ45) ವಿಮಾನವು ದಿಲ್ಲಿ ಮೂಲದ ವಿಎಸ್ಆರ್ ವೆಂಚರ್ಸ್ ಸಂಸ್ಥೆಯ ಒಡೆತನದಲ್ಲಿದೆ. ವಿಮಾನದ ತಾಂತ್ರಿಕ ಸ್ಥಿತಿ, ಹವಾಮಾನ ಪರಿಸ್ಥಿತಿ ಹಾಗೂ ಮಾನವ ದೋಷ ಸೇರಿದಂತೆ ಎಲ್ಲ ಅಂಶಗಳನ್ನು ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.