ಉತ್ತರಾಖಂಡ: ಚಲಿಸುವ ಕಾರಿನಲ್ಲೇ ಮಹಿಳೆ ಮೇಲೆ ಅತ್ಯಾಚಾರ; ಇಬ್ಬರ ಬಂಧನ
ರುದ್ರಾಪುರ: ಇಲ್ಲಿನ ಟ್ರಾನ್ಸಿಟ್ ಕ್ಯಾಂಪ್ ಪ್ರದೇಶದ ಬಳಿ ಚಲಿಸುತ್ತಿದ್ದ ಕಾರಿನಲ್ಲಿ 25 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ 25ರ ಬೆಳಿಗ್ಗೆ ಮಹಿಳೆ ಮನೆಯಿಂದ ಪಂತ್ನಗರದಲ್ಲಿರುವ ತನ್ನ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಇಬ್ಬರು ಆರೋಪಿಗಳು ಲಿಫ್ಟ್ ನೀಡುವುದಾಗಿ ನಂಬಿಸಿ ಕಾರಿಗೆ ಹತ್ತಿಸಿಕೊಂಡಿದ್ದಾರೆ. ಬಳಿಕ ಚಲಿಸುವ ಕಾರಿನಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ಕಾರಿಗೆ ಹತ್ತಿದ ತಕ್ಷಣ ಒಬ್ಬ ಆರೋಪಿ ಹಿಂದಿನ ಆಸನಕ್ಕೆ ಬಂದು ಅತ್ಯಾಚಾರ ಎಸಗಿದ್ದು, ನಂತರ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಮಹಿಳೆ ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 70(1) ಮತ್ತು 351(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಹೇಳಿಕೆ ಹಾಗೂ ನಂತರ ಸಂಗ್ರಹಿಸಲಾದ ಪುರಾವೆಗಳ ಆಧಾರದಲ್ಲಿ, ಮೊದಲ ಆರೋಪಿಯನ್ನು ಮಂಗಳವಾರ ಆತನ ಮನೆಯಿಂದ ಪೊಲೀಸರು ಬಂಧಿಸಿದ್ದಾರೆ. ಅಪರಾಧಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಸಂತ್ರಸ್ತೆಯ ಕೂದಲು ಸೇರಿದಂತೆ ಪ್ರಮುಖ ಪುರಾವೆಗಳನ್ನು ವಿಧಿವಿಜ್ಞಾನ ತಜ್ಞರು ಸಂಗ್ರಹಿಸಿದ್ದು, ಬಳಿಕ ಎರಡನೇ ಆರೋಪಿಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.