ಅಜಿತ್ ಪವಾರ್‌ಗೆ ವಿದಾಯ | ಬಾರಾಮತಿಯಲ್ಲಿ ಅಂತಿಮ ನಮನ
Screengrab:X/ANI
ಬಾರಾಮತಿ/ಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಯ ಮುಖ್ಯಸ್ಥ ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ಕಟೇವಾಡಿಯಲ್ಲಿರುವ ಅವರ ನಿವಾಸದಿಂದ ಅಂತ್ಯಕ್ರಿಯೆಗಾಗಿ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನಕ್ಕೆ ಕೊಂಡೊಯ್ಯಲಾಯಿತು. ರಸ್ತೆಯುದ್ದಕ್ಕೂ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
ಬುಧವಾರ (ಜ.28) ವಿಮಾನ ಅಪಘಾತದಲ್ಲಿ ನಿಧನರಾದ ಅಜಿತ್ ಪವಾರ್ ಅವರ ಅಗಲಿಕೆಗೆ ರಾಜಕೀಯ ವಲಯದಲ್ಲಿ ಆಳವಾದ ಶೋಕ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಅವರು ಅಜಿತ್ ಪವಾರ್ ಅವರನ್ನು ಸ್ಮರಿಸಿ, ಅವರನ್ನು ‘ದೂರದೃಷ್ಟಿಯ ನಾಯಕ’ ಎಂದರು.
“ಮಹಾರಾಷ್ಟ್ರ ತನ್ನ ಒಬ್ಬ ತಾರೆಯನ್ನು ಕಳೆದುಕೊಂಡಿದೆ. ಈ ನಷ್ಟವನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ. ಸಾರ್ವಜನಿಕ ಸೇವೆಗೆ ಸಂಪೂರ್ಣವಾಗಿ ಬದ್ಧರಾಗಿದ್ದ ಅವರು ಮಾತಿಗಿಂತ ಕೆಲಸಕ್ಕೆ ಆದ್ಯತೆ ನೀಡಿದವರು. ಕಳೆದ 25 ವರ್ಷಗಳಲ್ಲಿ ರಾಜ್ಯ ಸಚಿವರಾಗಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಲಭಿಸಿತ್ತು. ಮಹಾರಾಷ್ಟ್ರದ ಅಭಿವೃದ್ಧಿಗೆ ಅವರ ಕೊಡುಗೆ ಮಹತ್ತರ,” ಎಂದು ವಡೆಟ್ಟಿವಾರ್ ಹೇಳಿದರು.