×
Ad

ಬಾರಾಮತಿ ವಿಮಾನ ದುರಂತ: ಪೈಲಟ್ ತನ್ನ ಅಜ್ಜಿಗೆ ಕಳುಹಿಸಿದ ಕೊನೆಯ ಸಂದೇಶ ಏನು?

Update: 2026-01-29 08:08 IST

PC: x.com/ndtv

ಗ್ವಾಲಿಯರ್: “ಹಾಯ್, ಗುಡ್ ಮಾರ್ನಿಂಗ್ ದದ್ದಾ” — ಇದು ಬಾರಾಮತಿಯಲ್ಲಿ ಬುಧವಾರ ವಿಮಾನ ಅಪಘಾತಕ್ಕೀಡಾದ ವಿಮಾನದ ಕ್ಯಾಪ್ಟನ್ ಶಾಂಭವಿ ಪಾಠಕ್ ತಮ್ಮ ಅಜ್ಜಿಗೆ ಕಳುಹಿಸಿದ ಕೊನೆಯ ಸಂದೇಶವಾಗಿತ್ತು.

ಕೆಲವೇ ನಿಮಿಷಗಳ ಬಳಿಕ ಅಜ್ಜಿ ಮೀರಾ ಪಾಠಕ್ ಎಂದಿನಂತೆ “ಗುಡ್ ಮಾರ್ನಿಂಗ್ ಚಿನಿ” ಎಂದು ಪ್ರತಿಕ್ರಿಯಿಸಿದರು. ಮುಂಜಾನೆ ಸುಮಾರು 6.30ಕ್ಕೆ ಕಳುಹಿಸಿದ ಈ ಸಂದೇಶವೇ ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಕೊನೆಯ ಸಂದೇಶವಾಗುತ್ತದೆ ಎಂದು ಅವರು ಊಹಿಸಿರಲಿಲ್ಲ.

ಬುಧವಾರ ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಇನ್ನೂ ನಾಲ್ವರು ಈ ದುರಂತದಲ್ಲಿ ಸಾವನ್ನಪ್ಪಿದರು. ಮೃತರಲ್ಲಿ ಗ್ವಾಲಿಯರ್‌ನ ಯುವ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಕೂಡ ಸೇರಿದ್ದರು. ಈ ದುರ್ಘಟನೆಗೆ ಸಂಬಂಧಿಸಿದ ಸುದ್ದಿ ಅಜ್ಜಿಗೆ ತಲುಪುವಷ್ಟರಲ್ಲಿ, ಸಂದೇಶ ಕಳುಹಿಸಿದ ಮೊಬೈಲ್ ಫೋನ್ ಶಾಶ್ವತವಾಗಿ ಸೈಲೆಂಟ್ ಆಗಿತ್ತು.

“ಇದು ಕೊನೆಯ ಸಂದೇಶವಾಗಿರುತ್ತದೆ ಎಂದು ನಾನು ಎಂದಿಗೂ ಎಣಿಸಿರಲಿಲ್ಲ,” ಎಂದು ನಡುಗುವ ಧ್ವನಿಯಲ್ಲಿ ಪಾಠಕ್ ಹೇಳಿದರು. “ಏನೋ ಅವಘಡ ಸಂಭವಿಸಿದೆ ಎಂಬ ಅನುಮಾನ ನನಗೆ ಮೂಡಿತ್ತು,” ಎಂದು ಅವರು ನೆನಪಿಸಿಕೊಂಡರು.

“ನನ್ನ ಹಿರಿಯ ಮಗ ಒಂದು ವಿಮಾನ ಅಪಘಾತ ಸಂಭವಿಸಿದೆ ಎಂದು ಹೇಳಿದ. ನಿನ್ನೆ ರಾತ್ರಿ ನಾನು ‘ಚಿನಿ ಎಲ್ಲಿದ್ದಾಳೆ?’ ಎಂದು ಅವನನ್ನು ಕೇಳಿದ್ದೆ. ಅವಳು ಸಾಮಾನ್ಯವಾಗಿ ಮುಂಬೈಯಲ್ಲಿ ವಾಸಿಸುತ್ತಾಳೆ. ಆಕೆ ಹೆಚ್ಚು ಕರೆ ಮಾಡುವುದಿಲ್ಲ, ಮೆಸೇಜ್‌ಗಳೂ ಕಡಿಮೆ. ಇಂದು ಏಕೆ ನನ್ನನ್ನು ನೆನೆಸಿಕೊಂಡಳು ಎಂಬುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ,” ಎಂದರು.

ಸುಮಾರು ಬೆಳಿಗ್ಗೆ 9 ಗಂಟೆಯ ವೇಳೆಗೆ ಶಾಂಭವಿಯ ತಂದೆ ವಿಕ್ರಮ್ ಪಾಠಕ್ ಕರೆ ಮಾಡಿದರು. ಅವರು ಅಳುತ್ತಿದ್ದರು. “ಮತ್ತೆ ಕರೆ ಮಾಡುವುದಾಗಿ ಹೇಳಿ ಫೋನ್‌ನ್ನು ಕಡಿತಗೊಳಿಸಿದರು. ಅಪಘಾತದ ಬಗ್ಗೆ ಅವರಿಗೆ ಆಗಲೇ ಮಾಹಿತಿ ಲಭಿಸಿತ್ತು. ಆಗಲೇ ನನ್ನ ಹೃದಯದಲ್ಲಿ ಏನೋ ಕೆಟ್ಟದ್ದು ಸಂಭವಿಸಿದೆ ಎಂಬ ಭಾವನೆ ಮೂಡಿತ್ತು,” ಎಂದು ಮೀರಾ ಪಾಠಕ್ ಹೇಳಿದರು.

ಶಾಂಭವಿ ಪಾಠಕ್ ಇನ್ನಿಲ್ಲ ಎಂಬ ದುಃಖದ ಸುದ್ದಿ ಸುಮಾರು ಎರಡು ಗಂಟೆಗಳ ಬಳಿಕ ಅಧಿಕೃತವಾಗಿ ದೃಢಪಟ್ಟಿತು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News