×
Ad

ಬಿಹಾರ ವಿಧಾನಸಭಾ ಚುನಾವಣೆ | 35 ಸ್ಥಾನಗಳಿಗೆ ಬೇಡಿಕೆ ಇಟ್ಟ ಸಿಪಿಐ, ಸಿಪಿಐಎಂ

Update: 2025-10-03 21:38 IST

Credit: PTI Photo

ಪಾಟ್ನಾ: ಮಹಾಘಟಬಂಧನ್ ಮೈತ್ರಿಕೂಟದ ಭಾಗವಾಗಿರುವ ಸಿಪಿಐ, ಸಿಪಿಐಎಂ, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮಗೆ 35 ಸ್ಥಾನಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿವೆ. ಇದರೊಂದಿಗೆ ಸ್ಥಾನ ಹಂಚಿಕೆ ಒಪ್ಪಂದವನ್ನು ಯಾವುದೇ ವಿಳಂಬವಿಲ್ಲದೆ ಆದಷ್ಟೂ ಶೀಘ್ರವಾಗಿ ಅಂತಿಮಗೊಳಿಸಬೇಕಾದ ಅಗತ್ಯವಿದೆ ಎಂದು ಒತ್ತಿ ಹೇಳಿವೆ.

ಅಲ್ಲದೆ ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಎಷ್ಟು ಬೇಗ ಸಾಧ್ಯವೊ ಅಷ್ಟು ಬೇಗ ಘೋಷಿಸಬೇಕು ಎಂದೂ ಎಡಪಕ್ಷಗಳು ಆಗ್ರಹಿಸಿವೆ.

ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟದ ಭಾಗವಾಗಿರುವ ಸಿಪಿಐ 24 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರೆ, ಸಿಪಿಐಎಂ 11 ಸ್ಥಾನಗಳಿಗೆ ಬೇಡಿಕೆ ಇರಿಸಿದೆ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಸಿಪಿಐಎಂಎಲ್ (ಲಿಬರೇಶನ್) ಮತ್ತಿತರ ಪಕ್ಷಗಳೂ ಸೇರಿವೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ರಾಮ್ ನರೇಶ್ ಪಾಂಡೆ, "ಸಿಪಿಐ ಹಾಗೂ ಸಿಪಿಐಎಂ ಪರವಾಗಿ ಮಹಾಘಟಬಂಧನ್‌ನಲ್ಲಿರುವ ದೊಡ್ಡ ಪಕ್ಷಗಳು ತಮ್ಮ ಕೆಲ ಸ್ಥಾನಗಳನ್ನು ತ್ಯಾಗ ಮಾಡಬೇಕು" ಎಂದು ಮನವಿ ಮಾಡಿದ್ದಾರೆ.

ಸ್ಥಾನ ಹಂಚಿಕೆ ಮಾತುಕತೆಯಲ್ಲಿ ಮತ್ತಷ್ಟು ವಿಳಂಬವಾದರೆ, ಅದರಿಂದ ರಾಜ್ಯ ಮತ್ತು ಮೈತ್ರಿಕೂಟಕ್ಕೆ ಅಪಾಯವಾಗಲಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಲಲನ್ ಚೌಧರಿ ಎಚ್ಚರಿಕೆ ನೀಡಿದ್ದಾರೆ.

ಈ ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಡಳಿತಾರೂಡ ಎನ್‌ಡಿಎ ಮೈತ್ರಿಕೂಟ ಹಾಗೂ ವಿರೋಧ ಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟದ ನಡುವೆ ನಿಕಟ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಅಂದಾಜಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News