ಬಿಹಾರ ವಿಧಾನಸಭಾ ಚುನಾವಣೆ | ಪಟ್ಟಿಯಿಂದ ತೆಗೆದುಹಾಕಿರುವ ಮತದಾರರಿಗೆ ಮನವಿ ಸಲ್ಲಿಸಲು ನೆರವು ನೀಡುವಂತೆ ಬಿಹಾರ ಕಾನೂನು ಸೇವೆಗೆ ಸುಪ್ರೀಂ ಕೋರ್ಟ್ ನಿರ್ದೇಶನ
ಸುಪ್ರೀಂ ಕೋರ್ಟ್ | Photo Credi : PTI
ಹೊಸದಿಲ್ಲಿ: ಅಂತಿಮ ಮತದಾರರ ಪಟ್ಟಿಯಿಂದ ಹೊರ ಹಾಕಲ್ಪಟ್ಟಿರುವ ಮತದಾರರು ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ನೆರವು ಒದಗಿಸುವಂತೆ ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಕುರಿತು ತನ್ನ ಜಿಲ್ಲಾ ಮಟ್ಟದ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆಯೂ ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಗುರುವಾರ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮತದಾರರ ಪಟ್ಟಿಯಿಂದ ಹೊರಹಾಕಲ್ಪಟ್ಟಿರುವ ಮತದಾರರ ಪಟ್ಟಿಯನ್ನು ಅರೆ ಕಾನೂನು ಸ್ವಯಂಸೇವಕರು ಬಿಡುಗಡೆ ಮಾಡಲಿದ್ದಾರೆ ಹಾಗೂ ಅವರು ಮೇಲ್ಮನವಿಗಳನ್ನು ಸಲ್ಲಿಸಲು ನೆರವು ನೀಡಲಿದ್ದಾರೆ.
ಇದರೊಂದಿಗೆ, ಮತದಾರರ ಪಟ್ಟಿಯಿಂದ ಅವರ ಹೆಸರು ವಜಾಗೊಳ್ಳಲು ಕಾರಣವೇನು ಎಂಬುದರ ವಿಸ್ತೃತ ಆದೇಶಗಳು ಅವರಿಗೆ ದೊರೆಯುವುದನ್ನು ಖಾತರಿಪಡಿಸಲಿದ್ದಾರೆ ಎಂದು ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಜೋಯ್ ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಚುನಾವಣಾ ಆಯೋಗದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ಅಕ್ಟೋಬರ್ 16ರಂದು ನಡೆಯಲಿರುವ ವಿಚಾರಣೆಯ ವೇಳೆ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದ ಸಂದರ್ಭದಲ್ಲಿ ಮತಪಟ್ಟಿಯಿಂದ ಹೊರಹಾಕಲ್ಪಟ್ಟಿರುವ ಮತದಾರರು ನಿಗದಿತ ಸಮಯದೊಳಗೆ ಸಲ್ಲಿಸುವ ಮನವಿಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಕುರಿತು ಸಕಾರಣ ಆದೇಶ ಹೊರಡಿಸುವುದನ್ನು ಪರಿಗಣಿಸಲಾಗುವುದು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.