ಬಿಹಾರ ವಿಧಾನಸಭಾ ಚುನಾವಣೆ | 61 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್; ಇಂಡಿಯಾ ಮೈತ್ರಿಕೂಟದ ವಿರುದ್ಧವೇ ಸ್ಪರ್ಧೆ
Photo Credit : PTI
ಪಾಟ್ನಾ: 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸ್ಥಾನಗಳಿಗಿಂತ ಐದು ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಸಮ್ಮತಿಸಿದ್ದು, ಈ ಬಾರಿ ಒಟ್ಟು 61 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈ ಪೈಕಿ ವೈಶಾಲಿ, ಲಾಲ್ ಗಂಜ್, ಕಹಲ್ಗಾಂವ್, ರಾಜಪಕಡ್ ಹಾಗೂ ರೊಸೆರಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಆರ್ಜೆಡಿ ಪರಸ್ಪರ ಎದುರಾಳಿಯಾಗಲಿವೆ. ಸಿಪಿಐ ಸ್ಪರ್ಧಿಸಿರುವ ಬಚ್ವಾರಾ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಎದುರಾಳಿಯಾಗಿ ಸ್ಪರ್ಧಿಸಲಿದೆ.
ಈ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಹೆಸರೇಳಲಿಚ್ಛಿಸದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು, “ತಳಹಂತದ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುವಲ್ಲಿ ನಮ್ಮ ವರಿಷ್ಠ ನಾಯಕತ್ವ ವಿಫಲವಾಗಿದೆ ಹಾಗೂ ಅರ್ಹರಲ್ಲದವರಿಗೆ ಟಿಕೆಟ್ ನೀಡಿದೆ ಎಂಬ ಸಂಗತಿಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
“ಬಾರಾಬಿಘ ವಿಧಾನಸಭಾ ಕ್ಷೇತ್ರವನ್ನೇ ತೆಗೆದುಕೊಳ್ಳಿ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಗಜಾನಂದ್ ಪ್ರಸಾದ್ ಸಾಹಿ 2020ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 200ಕ್ಕಿಂತ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರು.ಆದರೆ, ಈ ಬಾರಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಆದರೆ, ಕಳೆದ ಬಾರಿಯ ಚುನಾವಣೆಯಲ್ಲಿ 25,000ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದ ಮಾಜಿ ಶಾಸಕ ಅಮಿತ್ ಕುಮಾರ್ ತುನ್ನ ಹಾಗೂ ಮಂಗಳಂ ಸಿಂಗ್ ಅವರಿಗೆ ಈ ಬಾರಿ ಕ್ರಮವಾಗಿ ರೀಗಾ ಮತ್ತು ಬಗಾಹ ವಿಧಾನಸಭಾ ಕ್ಷೇತ್ರಗಳಿಂದ ಟಿಕೆಟ್ ನೀಡಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ, ಸೋಮವಾರ ಬೆಳಗ್ಗೆ ಬಿಹಾರದ ಪ್ರಮುಖ ವಿರೋಧ ಪಕ್ಷವಾದ ಆರ್ಜೆಡಿ ಒಟ್ಟು 143 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಸದ್ಯ ಕುಟುಂಬ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್ ರಾಮ್ ಅವರ ಎದುರು ಆರ್ಜೆಡಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ವದಂತಿಗಳಿಗೆ ಈ ಪಟ್ಟಿ ಅಂತ್ಯವಾಡಿತ್ತು.
243 ಸದಸ್ಯ ಬಲದ ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಹಾಗೂ ನವೆಂಬರ್ 11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.