ಬಿಹಾರ ವಿಧಾನಸಭಾ ಚುನಾವಣೆ : ಖ್ಯಾತ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಪ್ರಕಾರ ವಿಜೇತರನ್ನು ನಿರ್ಧರಿಸಬಹುದಾದ 5 ಅಂಶಗಳು
ಖ್ಯಾತ ಪತ್ರಕರ್ತ ರಾಜದೀಪ್ ಸರ್ದೇಸಾಯಿ | Photo Credit : X
ಹೊಸದಿಲ್ಲಿ,ಅ.7: ಬಿಹಾರದಲ್ಲಿ ಅಧಿಕೃತವಾಗಿ ಚುನಾವಣಾ ಕಹಳೆ ಮೊಳಗಿದೆ. ನ.6 ಮತ್ತು 11ರಂದು ಎರಡು ಹಂತಗಳಲ್ಲಿ ಚುನಾವಣೆಯನ್ನು ನಡೆಸುವುದಾಗಿ ಚುನಾವಣಾ ಆಯೋಗವು ಪ್ರಕಟಿಸುವುದರೊಂದಿಗೆ ರಾಜಕೀಯ ಹಣಾಹಣಿಗೆ ರಂಗವು ಸಜ್ಜುಗೊಂಡಿದೆ. ಆದರೆ ಈ ನಿರ್ಣಾಯಕ ಕದನದಲ್ಲಿ ಯಾರು ಮುಂದಿದ್ದಾರೆ? ಇಂಡಿಯಾ ಟುಡೇಯ ಸಲಹಾ ಸಂಪಾದಕ ರಾಜದೀಪ ಸರ್ದೇಸಾಯಿ ಅವರು ಅಂತಿಮವಾಗಿ ವಿಜೇತರನ್ನು ನಿರ್ಧರಿಸಬಹುದಾದ ಐದು ಪ್ರಮುಖ ಎಕ್ಸ್-ಅಂಶಗಳನ್ನು ಬೆಟ್ಟು ಮಾಡಿದ್ದಾರೆ.
► ಎನ್‌ಡಿಎಗೆ ಲೆಕ್ಕಾಚಾರದ ಲಾಭ
ರಾಜಕೀಯ ಅಂಕಗಣಿತದ ಆಧಾರದಲ್ಲಿ ಎನ್‌ಡಿಎ ಪ್ರಸ್ತುತ ಹೆಚ್ಚಿನ ಅನುಕೂಲಗಳನ್ನು ಹೊಂದಿರುವಂತೆ ಕಾಗದದ ಮೇಲೆ ಕಂಡು ಬರುತ್ತಿದೆ. ಆಡಳಿತ ಎನ್‌ಡಿಎ ಬಿಜೆಪಿ, ಜೆಡಿಯು, ಜಿತನ್ ರಾಮ ಮಾಂಝಿ, ಚಿರಾಗ ಪಾಸ್ವಾನ್ ಮತ್ತು ಉಪೇಂದ್ರ ಕುಶ್ವಾಹ ಅವರ ಪಕ್ಷಗಳನ್ನೊಳಗೊಂಡಿರುವ ವಿಶಾಲ ಮೈತ್ರಿಕೂಟವಾಗಿದೆ. ಸಂಖ್ಯಾತ್ಮಕವಾಗಿ ಈ ವಿಶಾಲ ಒಕ್ಕೂಟವು ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಒಳಗೊಂಡಿರುವ ಪ್ರತಿಪಕ್ಷಗಳ ಮೈತ್ರಿಕೂಟಕ್ಕಿಂತ ಬಲಿಷ್ಠವಾಗಿದೆ.
► ರಾಜಕೀಯ ಕೆಮಿಸ್ಟ್ರಿಯ ಸವಾಲು
ಲೆಕ್ಕಾಚಾರವು ಎನ್‌ಡಿಎ ಪರವಾಗಿದ್ದರೂ ಸ್ಥಳೀಯ ರಾಜಕೀಯ ಕೆಮಿಸ್ಟ್ರಿಯು ಚುನಾವಣೆಯನ್ನು ಹೆಚ್ಚು ಆಸಕ್ತಿದಾಯಕವನ್ನಾಗಿಸಿದೆ. ಹೆಚ್ಚಿನ ಸಮೀಕ್ಷೆಗಳು ಮುಖ್ಯಮಂತ್ರಿ ಹುದ್ದೆಗೆ ತೇಜಸ್ವಿ ಯಾದವ್ ಆದ್ಯತೆಯ ಆಯ್ಕೆಯಾಗಿದ್ದಾರೆ ಎನ್ನುವುದನ್ನು ಸೂಚಿಸಿವೆ. ಆದಾಗ್ಯೂ ಆರ್‌ಜೆಡಿಯ ಸಾಂಪ್ರದಾಯಿಕ ಮುಸ್ಲಿಮ್-ಯಾದವ್ ಮತಬ್ಯಾಂಕನ್ನು ಮೀರಿ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುವುದು ತೇಜಸ್ವಿ ಮುಂದಿರುವ ಬಹುದೊಡ್ಡ ಸವಾಲು ಆಗಿದೆ.
► ನಿತೀಶ್ ಕುಮಾರ್ ಅಂಶ
ಇನ್ನೊಂದೆಡೆ ಮುಖ್ಯಮಂತ್ರಿ ನಿತೀಶ್ ಕುಮಾರ್ 20 ವರ್ಷಗಳಿಂದಲೂ ಆಡಳಿತ ವಿರೋಧಿ ಅಲೆಯೊಂದಿಗೆ ಹೊರಾಡುತ್ತಿದ್ದಾರೆ ಮತ್ತು ಇತ್ತೀಚಿನ ವರ್ಷಗಳಲ್ಲಿ ತನ್ನ ವರ್ಚಸ್ಸು ಕಳೆದುಕೊಂಡಿರುವ ನಾಯಕ ಎಂದು ಅವರನ್ನು ನೋಡಲಾಗುತ್ತಿದೆ. ಅವರು ತನ್ನ ಪಕ್ಷಕ್ಕೆ ಆಸ್ತಿಯಾಗಿದ್ದಂತೆ ಹೊರೆಯೂ ಆಗಿದ್ದಾರೆ. ಅವರು ಸುಮಾರು ಶೇ.15ರಷ್ಟು ಮತಗಳ ಪಾಲು ಪಡೆಯುವುದರಿಂದ ಪಕ್ಷಕ್ಕೆ ಒಂದು ಆಸ್ತಿಯಾಗಿದ್ದಾರೆ, ಆದರೆ ಅವರು ಆಡಳಿತ ವಿರೋಧಿ ಅಲೆಯ ಮುಖವಾಗಿರುವುದರಿಂದ ಪಕ್ಷಕ್ಕೆ ಹೊರೆಯಾಗಿದ್ದಾರೆ. ಹೀಗಾಗಿ ನಿತೀಶ್ ತನ್ನ ನೆಲೆಯನ್ನು ಉಳಿಸಿಕೊಳ್ಳುತ್ತಾರೆಯೇ ಅಥವಾ ಅವರು ಈಗ ಶಾಶ್ವತ ಅವನತಿಯ ಹಾದಿಯಲ್ಲಿದ್ದಾರೆಯೇ ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ.
► ಕಲ್ಯಾಣ ಯೋಜನೆಗಳು Vs ಆಡಳಿತ ವಿರೋಧಿ ಅಲೆ
ಮತದಾರರನ್ನು ಸೆಳೆಯಲು ಎನ್‌ಡಿಎ ಸರಕಾರವು ಇತ್ತೀಚಿನ ತಿಂಗಳುಗಳಲ್ಲಿ ಮಹಿಳೆಯರು ಮತ್ತು ಯುವಜನರನ್ನು ಗುರಿಯಾಗಿಸಿಕೊಂಡು ಸರಣಿ ನೇರ ನಗದು ಪ್ರಯೋಜನಗಳ ಯೋಜನೆಗಳನ್ನು ಜಾರಿಗೊಳಿಸಿದೆ. ಮತದಾರರ ಕೈಗಳಲ್ಲಿ ನೇರವಾಗಿ ಹಣವನ್ನು ಹಾಕುವ ಈ ಕಾರ್ಯತಂತ್ರವು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಂತಹ ಇತರ ರಾಜ್ಯಗಳಲ್ಲಿ ಪರಿಣಾಮಕಾರಿಯಾಗಿದೆ. ಇಂತಹ ನೇರ ಕಲ್ಯಾಣ ಲಾಭಗಳು ಸಾಂಪ್ರದಾಯಿಕ ಜಾತಿ ಲೆಕ್ಕಾಚಾರಗಳಿಗೆ ಹೊಡೆತ ನೀಡುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಬಿಹಾರದಲ್ಲಿ ಆಡಳಿತ ವಿರೋಧಿ ಅಲೆಯನ್ನು ನಿವಾರಿಸುವಲ್ಲಿ ಪ್ರಬಲ ಸಾಧನವಾಗಬಹುದು.
►ವೈಲ್ಡ್‌ಕಾರ್ಡ್ ಪ್ರಶಾಂತ್ ಕಿಶೋರ್
ಅಂತಿಮ ಮತ್ತು ಕರಾರುವಾಕ್ಕಾಗಿ ಊಹಿಸಲಾಗದ ಅಂಶವೆಂದರೆ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ರಂಗಪ್ರವೇಶ. ಅವರ ಪ್ರಚಾರವು ಎಲ್ಲರ ಗಮನ ಸೆಳೆದಿದ್ದರೂ, ಅದನ್ನು ಮತಗಳನ್ನಾಗಿ ಪರಿವರ್ತಿಸುವುದು ನಿಜವಾದ ಪರೀಕ್ಷೆಯಾಗಿದೆ. ಅವರ ಪಕ್ಷವು ಶೇ.10ಕ್ಕೂ ಅಧಿಕ ಮತಗಳನ್ನು ಗಳಿಸಲು ಸಾಧ್ಯವಾದರೆ ಸ್ಪರ್ಧೆಯ ವ್ಯಾಪ್ತಿಯು ಹಿಗ್ಗಬಹುದು. 2020ರ ಚುನಾವಣೆಯು ಕೇವಲ 12,000 ಮತಗಳ ಅಂತರದಿಂದ ನಿರ್ಧಾರಗೊಂಡಿದ್ದರಿಂದ ಕಿಶೋರ್ ಸೆಳೆಯುವ ಅಲ್ಪ ಮತಗಳೂ ಉಭಯ ಪ್ರಮುಖ ಮೈತ್ರಿಕೂಟಗಳಿಂದ ಮತಗಳನ್ನು ಕಸಿದುಕೊಳ್ಳುವ ಮೂಲಕ ಅಂತಿಮ ಫಲಿತಾಂಶವನ್ನು ನಾಟಕೀಯವಾಗಿ ಬದಲಿಸಬಹುದು.