ಬಿಹಾರ: ಮರಳುಗಾರಿಕೆ ವಿವಾದ; ಮೂವರು ಸಹೋದರರನ್ನು ಗುಂಡಿಕ್ಕಿ ಹತ್ಯೆ
PC: x.com/NewIndianXpress
ಪಾಟ್ನಾ: ಜಮೀನಿನಲ್ಲಿ ಮರಳು ಮತ್ತು ಕಲ್ಲಿನ ಚೂರುಗಳನ್ನು ರಾಶಿ ಹಾಕುವ ಬಗ್ಗೆ ಧೀರ್ಘ ಕಾಲದಿಂದ ಇದ್ದ ವಿವಾದ ಮೂವರು ಸಹೋದರರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಶನಿವಾರ ಬಿಹಾರದ ಬಕ್ಸರ್ ನ ಅಹಿಯಾಪುರ ಗ್ರಾಮದಲ್ಲಿ ನಡೆದಿದೆ.
ರಾಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಹಿಯಾಪುರ ಗ್ರಾಮದ ಹೊರವಲಯದಲ್ಲಿರುವ ಕಾಲುವೆಯ ಬಳಿ ಬೆಳಿಗ್ಗೆ ನಡಿಗೆಗೆ ತೆರಳಿದ್ದ ವೇಳೆ ಬೆಳಿಗ್ಗೆ 5.15 ರ ಸುಮಾರಿಗೆ ಈ ಘಟನೆ ನಡೆದಿದ್ದು, ವಿನೋದ್ ಸಿಂಗ್ ಯಾದವ್ ಹಾಗೂ ಸುನೀಲ್ ಸಿಂಗ್ ಯಾದವ್ ಹಾಗೂ ವೀರೇಂದ್ರ ಸಿಂಗ್ ಯಾದವ್ ಮೃತಪಟ್ಟವರು.
ದುಷ್ಕರ್ಮಿಗಳು ಅವರ ಮೇಲೆ ಹತ್ತಿರದಿಂದ ಗುಂಡು ಹಾರಿಸಿದ್ದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ವೀರೇಂದ್ರ ಸಿಂಗ್ ಯಾದವ್ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಂಟು ಸಿಂಗ್ ಯಾದವ್ (35) ಎಂಬವರ ಹೊಟ್ಟೆ ಮತ್ತು ಕಾಲಿಗೆ ತೀವ್ರ ಗಾಯಗಳಾಗಿದ್ದು, ವಾರಣಾಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಸಹೋದರ ಪುಂಜ್ ಸಿಂಗ್ ಯಾದವ್ ಗೆ ಕೂಡಾ ಗುಂಡೇಟು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಜಾನೆ ವೇಳೆಗೆ ಕಾರಿನಲ್ಲಿ ಆಗಮಿಸಿದ ಗುಂಪು, ಸಂತ್ರಸ್ತರ ಜತೆ ಸಂಘರ್ಷಕ್ಕೆ ಇಳಿಯಿತು. ವಾಗ್ವಾದ ಹಾಗೂ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು ಗುಂಡು ಹಾರಿಸುವಲ್ಲಿ ಪರ್ಯಾವಸಾನಗೊಂಡಿತು. ದಾಳಿಕೋರರು ತಕ್ಷಣ ಪರಾರಿಯಾಗಿದ್ದಾರೆ.
ಈ ದಾಳಿಗೆ ಬಳಸಿದ ಕಾರು ಜಿಲ್ಲಾ ಮಂಡಳಿಯ ಮಾಜಿ ಸದಸ್ಯರೊಬ್ಬರಿಗೆ ಸೇರಿದ್ದು, ಈ ಗುಂಡಿನ ಕಾಳಗದಲ್ಲಿ ರಾಜಕೀಯ ಕೈವಾಡದ ಶಂಕೆ ಇದೆ. ಹರಳು ಮತ್ತು ಮರಳು ರಾಶಿ ಹಾಕುವ ಸಂಬಂಧ ಘರ್ಷಣೆ ನಡೆದಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.