×
Ad

ಬಿಹಾರ: ಮತಪಟ್ಟಿಯಿಂದ ಕಿತ್ತುಹಾಕಲಾದ ಮತದಾರರ ಹೆಸರು, ಕಾರಣ ಪ್ರಕಟಿಸಲು ಸುಪ್ರೀಂ ಸೂಚನೆ

Update: 2025-08-15 08:28 IST

ಹೊಸದಿಲ್ಲಿ: ಪ್ರತಿಯೊಬ್ಬ ವಯಸ್ಕರಿಗೆ ಮತಪಟ್ಟಿಯಲ್ಲಿ ಸೇರುವ ಮತ್ತು ಮತ ಚಲಾಯಿಸುವ ಶಾಸನಬದ್ಧ ಹಕ್ಕು ಇದ್ದು, ಬಿಹಾರದಲ್ಲಿ ಕೈಗೊಂಡಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ನಾವು ಬಯಸುತ್ತೇವೆ ಎಂದು ಸುಪ್ರೀಂಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ. ಮತದಾರರ ಪಟ್ಟಿಯಿಂದ ಕಿತ್ತುಹಾಕಿದ ಎಲ್ಲ 65 ಲಕ್ಷ ಮತದಾರರ ಹೆಸರು ಮತ್ತು ಕಿತ್ತುಹಾಕಲು ಕಾರಣಗಳನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಮತದಾರರನ್ನು ಕಿತ್ತುಹಾಕಿದ ವಿವರಗಳನ್ನು ಬಹಿರಂಗಪಡಿಸಬೇಕು ಎಂಬ ಯಾವುದೇ ಶಾಸನಾತ್ಮಕ ಹೊಣೆಗಾರಿಕೆ ಇಲ್ಲ ಎಂಬ ಚುನಾವಣಾ ಆಯೋಗದ ವಾದವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಈ ವಿವರಗಳು ಬುತ್ಮಟ್ಟದ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಬಳಿ ಇವೆ ಎಂದು ವಾದಿಸಿತ್ತು. ಎಸ್ಐಆರ್ ವಿರುದ್ದ ವ್ಯಾಪಕ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪಾರದರ್ಶಕತೆ ಅಗತ್ಯವಿದ್ದು, ತನ್ನ ನಿಲುವನ್ನು ಸಡಿಲಿಸುವಂತೆ ಚುನಾವಣಾ ಆಯೋಗಕ್ಕೆ ಸಲಹೆ ಮಾಡಿತು.

ಎಸ್ಐಆರ್ ನಡೆಸುವ ಚುನಾವಣಾ ಆಯೋಗದ ಅಧಿಕಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಮತಪಟ್ಟಿ ಪರಿಷ್ಕರಣೆಯ ಸಂಪೂರ್ಣ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎನ್ನುವುದು ನಮ್ಮ ಬಯಕೆ. ಕರಡು ಪಟ್ಟಿಯಿಂದ ಕಿತ್ತುಹಾಕಿರುವ 65 ಲಕ್ಷ ಮತದಾರರ ಹೆಸರು ಮತ್ತು ಅದಕ್ಕೆ ಕಾರಣಗಳನ್ನು ಪ್ರಕಟಿಸಿದರೆ, ಕಿತ್ತುಹಾಕಲ್ಪಟ್ಟ ವ್ಯಕ್ತಿಗೆ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ನ್ಯಾಯಸಮ್ಮತ ಅವಕಾಶ ನೀಡಿದಂತಾಗುತ್ತದೆ ಮತ್ತು ಎಲ್ಲೆಡೆ ಹರಡಿರುವ ನಿರ್ದಿಷ್ಟ ವಿವರಣೆಗಳಿಗೆ ತಿರುಗೇಟು ನೀಡಿದಂತಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜೊಯ್ಮಲ್ಯ ಬಗ್ಚಿ ಅವರು ಅಭಿಪ್ರಾಯಪಟ್ಟರು.

ಆಧಾರ್ ಕಾರ್ಡ್ ಸುಲಭವಾಗಿ ಲಭ್ಯವಿರುವ ಗುರುತಿನ ದಾಖಲೆಯಾಗಿರುವುದರಿಂದ ಕಿತ್ತುಹಾಕಲ್ಪಟ್ಟ ಮತದಾರರು ಮತಪಟ್ಟಿಗೆ ಸೇರ್ಪಡೆಯಾಗಲು ಬಯಸಿದರೆ ಆಧಾರ್ ಕಾರ್ಡನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸಬೇಕು ಎಂದೂ ಕೋರ್ಟ್ ನಿರ್ದೇಶನ ನೀಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News