'ತಪ್ಪು ಮಾಹಿತಿ ಹರಡುತ್ತಿದೆ': ಎಪ್ಸ್ಟೀನ್ ಕಡತದಲ್ಲಿ ಪ್ರಧಾನಿ ಮೋದಿ ಹೆಸರು ಉಲ್ಲೇಖಕ್ಕೆ ಸಂಬಂಧಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: ಜೆಫ್ರಿ ಎಪ್ಸ್ಟೀನ್ ಕಡತದಲ್ಲಿ ಸಾಮಾನ್ಯ ಇಮೇಲ್ ತುಣುಕನ್ನು ತಿರುಚಿ ರಾಜಕೀಯವಾಗಿ ಮಸಿ ಬಳಿಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಅಮೆರಿಕದ ನ್ಯಾಯಾಂಗ ಇಲಾಖೆ ವೆಬ್‌ಸೈಟ್‌ಗೆ ಲಿಂಕ್ ಹೊಂದಿರುವ ಇಮೇಲ್ ಅನ್ನು ಕಾಂಗ್ರೆಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಎಪ್ಸ್ಟೀನ್ ಫೈಲ್‌ಗಳಲ್ಲಿ ಪ್ರಧಾನಿ ಮೋದಿಯ ಹೆಸರು ಕಾಣಿಸಿಕೊಂಡಿದೆ ಎಂದು ಆರೋಪಿಸಿತ್ತು. ಈ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿತ್ತು.
ಇದರ ಬೆನ್ನಲ್ಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜೆಫ್ರಿ ಎಪ್ಸ್ಟೀನ್ ನಡುವೆ ನೇರ ಅಥವಾ ಪರೋಕ್ಷ ಸಂಪರ್ಕ ನಡೆದಿರುವ ಬಗ್ಗೆ ಯಾವುದೇ ಪುರಾವೆಯಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಎಕ್ಸ್‌ನಲ್ಲಿ ಕಾಂಗ್ರೆಸ್ ಮಾಡಿದ ಪೋಸ್ಟ್ ಅನ್ನು ವಂಚನೆ ಎಂದು ಕರೆದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, ವಿರೋಧ ಪಕ್ಷವು ಪ್ರಧಾನ ಮಂತ್ರಿಯ ಪ್ರತಿಷ್ಠೆಯನ್ನು ಕೆಡಿಸಲು ಮತ್ತು ಪ್ರಪಂಚದ ಮುಂದೆ ಭಾರತದ ಖ್ಯಾತಿಗೆ ಧಕ್ಕೆ ತರಲು ದಾಖಲೆಯನ್ನು ಎಡಿಟ್ ಮಾಡಿ ಹಂಚಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಹಂಚಿಕೊಂಡ ಜೆಫ್ರಿ ಎಪ್ಸ್ಟೀನ್ ಅವರ ಇಮೇಲ್‌ನಲ್ಲಿ 'ಅವರ ಸಲಹೆ' ಎಂಬ ಪದಗಳನ್ನು ಸೇರಿಸಿದ್ದು, ಪ್ರಧಾನಿ ಮೋದಿ ಅವರಿಂದ ಸಲಹೆ ಪಡೆದಿದ್ದಾರೆ ಎಂದು ಬಿಂಬಿಸಿದೆ. ಈ ಪದಗಳು ಮೂಲ ಇಮೇಲ್‌ನಲ್ಲಿ ಇರಲಿಲ್ಲ. ಇಮೇಲ್ ಅನ್ನು ಮೋಸದಿಂದ ಎಡಿಟ್ ಮಾಡುವ ಮೂಲಕ ಕಾಂಗ್ರೆಸ್ ಈ ಪದಗಳನ್ನು ಸೇರಿಸಿದೆ ಎಂದು ಸಂಬಿತ್ ಪಾತ್ರ ಆರೋಪಿಸಿದ್ದಾರೆ.
ಇಂತಹ ಕಲ್ಪಿತ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಪ್ರಧಾನಿಯ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸಿದ ಕಾಂಗ್ರೆಸ್‌ಗೆ ದೇಶದ ಜನರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ.