×
Ad

Kerala | ವೆಲ್ಲಪ್ಪಳ್ಳಿ ನಟೇಶನ್‌ಗೆ ಘೋಷಿಸಿದ ಪದ್ಮಭೂಷಣ ಹಿಂಪಡೆಯುವಂತೆ ದೂರು; ಗೃಹ ಸಚಿವಾಲಯಕ್ಕೆ ಕಳುಹಿಸಿದ ರಾಷ್ಟ್ರಪತಿ

Update: 2026-01-31 23:44 IST

ವೆಲ್ಲಪ್ಪಳ್ಳಿ ನಟೇಶನ್‌|Photo: Facebook/ Vellappally Natesan

ಹೊಸದಿಲ್ಲಿ: ಎಸ್‌ಎನ್‌ಡಿಪಿ ಯೋಗಂ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಳ್ಳಿ ನಟೇಶನ್ ಗೆ ಘೋಷಿಸಿದ ಪದ್ಮಭೂಷಣ ಪ್ರಶಸ್ತಿಯನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಲಾದ ದೂರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಾರೆ.

ದೂರಿನಲ್ಲಿರುವ ಆರೋಪಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವಾಲಯಕ್ಕೆ ಸೂಚಿಸಲಾಗಿದೆ.

‘ಸೇವ್ ಯೂನಿವರ್ಸಿಟಿ’ ಅಭಿಯಾನ ಸಮಿತಿಯ ಅಧ್ಯಕ್ಷ ಆರ್‌.ಎಸ್‌. ಶಶಿಕುಮಾರ್ ಅವರು ಈ ದೂರು ಸಲ್ಲಿಸಿದ್ದಾರೆ. ವೆಲ್ಲಪ್ಪಳ್ಳಿ ನಟೇಶನ್ ಅವರು ಹಿಂದಿನ ಸಂದರ್ಭಗಳಲ್ಲಿ ಪದ್ಮ ಪ್ರಶಸ್ತಿಗಳನ್ನು ಸಾರ್ವಜನಿಕವಾಗಿ ಅವಮಾನಿಸಿರುವ ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಂತಹ ವ್ಯಕ್ತಿಗೆ ಉನ್ನತ ನಾಗರಿಕ ಗೌರವ ನೀಡುವುದು ಅನರ್ಹ ಎಂದು ಹೇಳಲಾಗಿದೆ.

ಪದ್ಮ ಪ್ರಶಸ್ತಿಯನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡಿದ ವ್ಯಕ್ತಿಗೆ ಅದೇ ಪ್ರಶಸ್ತಿಯನ್ನು ನೀಡುವುದು ಅದರ ಘನತೆಯನ್ನು ಕುಗ್ಗಿಸುವುದಲ್ಲದೆ, ಹಿಂದಿನ ಪ್ರಶಸ್ತಿ ಪುರಸ್ಕೃತರ ಗೌರವಕ್ಕೂ ಧಕ್ಕೆ ಉಂಟುಮಾಡುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗೆ ದೇಶದ ಉನ್ನತ ನಾಗರಿಕ ಗೌರವಗಳಲ್ಲಿ ಒಂದನ್ನು ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಲಾಗಿದೆ.

ಮಾಧ್ಯಮ ಸಂವಾದದ ವೇಳೆ ವೆಲ್ಲಪ್ಪಳ್ಳಿ ನಟೇಶನ್ ಅವರು ಪದ್ಮ ಪ್ರಶಸ್ತಿಗಳ ಮೌಲ್ಯವನ್ನು ಪ್ರಶ್ನಿಸುವ ರೀತಿಯ ಹೇಳಿಕೆಗಳನ್ನು ನೀಡಿದ್ದು, ಅವುಗಳನ್ನು ಹಣದ ಮೂಲಕ ಪಡೆಯಬಹುದು ಎಂಬ ಮಾತುಗಳನ್ನು ಆಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಪದ್ಮಭೂಷಣ ಪ್ರಶಸ್ತಿ ಘೋಷಣೆಗೆ ಮುನ್ನವೇ ಎಸ್‌ಎನ್‌ಡಿಪಿ ರಕ್ಷಣಾ ಸಮಿತಿಯು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿತ್ತು ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವರ್ಷ ವೆಲ್ಲಪ್ಪಳ್ಳಿ ನಟೇಶನ್ ಹಾಗೂ ನಟ ಮಮ್ಮುಟ್ಟಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿತ್ತು. ಅದೇ ವೇಳೆ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಕೆ.ಟಿ. ಥಾಮಸ್ ಹಾಗೂ ಆರೆಸ್ಸೆಸ್ ಪ್ರಚಾರಕ ಮತ್ತು ‘ಜನ್ಮಭೂಮಿ’ ಮಾಜಿ‌ ಸಂಪಾದಕ ಪಿ. ನಾರಾಯಣನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News